ಮ್ಯಾಡ್ರಿಡ್: ಸ್ಪೇನ್ನ ಮಧ್ಯಭಾಗದಲ್ಲಿರುವ ಟೊಲೆಡೊ ಪ್ರಾಂತ್ಯದಲ್ಲಿ ಎರಡು ಅತಿವೇಗದ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ವರದಿಗಳ ಪ್ರಕಾರ, ಇಂದು ಬೆಳಿಗ್ಗೆ ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಒಂದು ರೈಲು ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಎರಡು ರೈಲುಗಳು ಒಂದೇ ಮಾರ್ಗದಲ್ಲಿ ಹೇಗೆ ಸಮೀಪಕ್ಕೆ ಬಂದವು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಮೃತಪಟ್ಟವರ ಸಂಖ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ.
ಈ ರೈಲು ಅಪಘಾತದ ಪರಿಣಾಮ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಿಂದ ಸಿಯುಡಾಡ್ ರಿಯಲ್ ಹಾಗೂ ದಕ್ಷಿಣದ ಅಂಡಲೂಸಿಯಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ. ಮಧ್ಯ ಮತ್ತು ದಕ್ಷಿಣ ಸ್ಪೇನ್ನ ವಿವಿಧ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವ ಸಾಧ್ಯತೆಯಿದೆ.
ರೈಲು ಸೇವೆಗಳು ಯಾವಾಗ ಪುನರಾರಂಭವಾಗಲಿವೆ ಎಂಬ ಬಗ್ಗೆ ಸದ್ಯಕ್ಕೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಪಘಾತದ ಕಾರಣ ಹಾಗೂ ಸಾವು-ನೋವಿನ ನಿಖರ ವಿವರಗಳು ಅಧಿಕಾರಿಗಳಿಂದ ದೃಢಪಟ್ಟ ಬಳಿಕವೇ ಘಟನೆಯ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.










