ಮೈಸೂರು: ಮೈಸೂರು ಅರಮನೆ ಹಾಗೂ ದಸರಾ ಆಚರಣೆಗೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ಯತೀಂದ್ರ ಸಿದ್ದರಾಮಯ್ಯ ನಡುವಿನ ಹೇಳಿಕೆಗಳ ವಿವಾದ ಮುಂದುವರಿದಿದೆ. ರಾಜಮಾತೆಯವರ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡಿದ್ದೇ ಹೊರತು ಯಾವುದೇ ತಪ್ಪು ಮಾತನಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಅರಮನೆ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೂ ಶಾಸನದ ಪ್ರಕಾರ ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು ಎಂದು ತಾವು ಹೇಳಿದ್ದಾಗಿ ಯತೀಂದ್ರ ವಿವರಿಸಿದ್ದಾರೆ. ಈ ವಿಚಾರದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ರಾಜಮಾತೆಯವರ ಮಾತುಗಳಿಗೆ ಪ್ರತಿಕ್ರಿಯಿಸಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ದಸರಾ ಆಚರಣೆ ಸಂದರ್ಭದಲ್ಲಿ ಜಂಬೂಸವಾರಿ ಹಾಗೂ ಚಿನ್ನದ ಅಂಬಾರಿಯ ಮಹತ್ವದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರಸ್ತಾಪಿಸಿದ್ದರು. ಚಿನ್ನದ ಅಂಬಾರಿ ಇಲ್ಲದೆ ವಿಜಯದಶಮಿಯ ಜಂಬೂಸವಾರಿ ನಡೆಸುವುದು ಅಸಾಧ್ಯ. ಅಂಬಾರಿಗೆ ಸಂಬಂಧಿಸಿದ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಯತೀಂದ್ರ ಹೇಳಿದ್ದಾರೆ.
ಅರಮನೆ ಅಥವಾ ದಸರಾ ಆಚರಣೆಗೆ ಸಂಬಂಧಿಸಿದಂತೆ ಯಾರಿಗಾದರೂ ಅಸಮಾಧಾನ ಅಥವಾ ದೂರುಗಳಿದ್ದರೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅನಗತ್ಯವಾಗಿ ವಿವಾದ ಮುಂದುವರಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ವಿವಾದದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಜಮನೆತನದವರಿಗೆ ಯಾವುದೇ ತೊಂದರೆಯಾಗಿದ್ದರೆ ಅವರನ್ನು ಕರೆಸಿ ಮಾತುಕತೆ ನಡೆಸುತ್ತೇವೆ. ಸರ್ಕಾರದ ಕಡೆಯಿಂದ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹೀಗಿರುವಾಗ ಇದೇ ವಿಚಾರದ ಬಗ್ಗೆ ತಾವು ಮತ್ತೆ ಮಾತನಾಡುವ ಅಗತ್ಯವಿಲ್ಲ ಎಂದು ಯತೀಂದ್ರ ಹೇಳಿದ್ದಾರೆ.
ರಾಜಮಾತೆಯವರ ಬಗ್ಗೆ ತಾವು ಯಾವುದೇ ತಪ್ಪಾದ ಹೇಳಿಕೆ ನೀಡಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವುದರಿಂದ ಕ್ಷಮೆಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮೈಸೂರು ಅರಮನೆ ಹಾಗೂ ರಾಜಮನೆತನಕ್ಕೆ ಸಂಬಂಧಿಸಿದ ಈ ವಿವಾದ ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸವನ್ನೂ ಯತೀಂದ್ರ ವ್ಯಕ್ತಪಡಿಸಿದ್ದಾರೆ.








