HomeGadag Newsಮಣ್ಣೆತ್ತಿನ ಮೂರ್ತಿಗಳ ಮಾರಾಟದ ಭರಾಟೆ ಜೋರು

ಮಣ್ಣೆತ್ತಿನ ಮೂರ್ತಿಗಳ ಮಾರಾಟದ ಭರಾಟೆ ಜೋರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೃಷಿಕರ ಬದುಕಿಗೆ ಆಧಾರವಾದ ಮಣ್ಣು ಮತ್ತು ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯದ ಮಣ್ಣೆತ್ತಿನ ಅಮವಾಸ್ಯೆ ಹಬ್ಬದ ಆಚರಣೆಗಾಗಿ ಪಟ್ಟಣದಲ್ಲಿ ಮಂಗಳವಾರದಿಂದಲೇ ಮಣ್ಣೆತ್ತಿನ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿಯೇ ನಡೆಯಿತು. ವಿಶೇಷವಾಗಿ ಬೇಕಾದ ಮಣ್ಣಿನ ಕೊರತೆ, ಖರ್ಚುವೆಚ್ಚ ಹೆಚ್ಚಳದಿಂದ ಮಣ್ಣೆತ್ತಿನ ಮೂರ್ತಿಗಳ ಬೆಲೆಯಲ್ಲೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.

ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆ-ಬೆಳೆ ರೈತರಲ್ಲಿ ಹೊಸ ಭರವಸೆ, ಹರ್ಷ ಮೂಡಿಸಿದ್ದು ಇತ್ತೀಚಿಗಷ್ಟೇ ಕಾರಹುಣ್ಣಿಮೆ ಹಬ್ಬದ ಸಂಭ್ರಮ ಸವಿದ ರೈತ ಸಮುದಾಯ ಮತ್ತೀಗ ಮಣ್ಣೆತ್ತಿನ ಹಬ್ಬದ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಶಿವನ ವಾಹನವೂ ಆದ ನಂದಿಯು ಇದೇ ಅಮವಾಸ್ಯೆ ದಿನ ಜನ್ಮ ತಾಳಿದೆ ಎಂಬ ನಂಬಿಕೆಯೂ ಜನಪದರಲ್ಲಿದೆ.

ರೈತರ ಕುಟುಂಬದವರು ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣೆತ್ತಿನ ಮೂರ್ತಿಗಳು ಅದರ ಗ್ವಾದಲಿ ಇರುವಂತೆ ಜಗುಲಿಯ ಮೇಲಿಟ್ಟು ಕರಿಗಡುಬು, ಕಿಚಡಿ ಪ್ರಸಾದ ಮಾಡಿ ಶೃದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಕೆಲವರು ಹಬ್ಬದ ದಿನ ಮಾತ್ರ ಕೆಲವರು ನಾಗರ ಪಂಚಮಿವರೆಗೂ ಪೂಜಿಸಿ ನಂತರ ಮೂರ್ತಿಗಳನ್ನು ತಮ್ಮ ಹೊಲಗಳಲ್ಲಿನ ಬನ್ನಿ ಮರದ ಕೆಳಗಿಟ್ಟು ಉತ್ತಮ ಫಸಲು ಬರಲಿ, ಎತ್ತುಗಳಿಗೆ ಯಾವುದೇ ಖಾಯಿಲೆ ಬಾರದಿರಲಿ ಎಂದು ನಮಿಸುತ್ತಾರೆ. ಕೆಲವರು ವರ್ಷ ಪೂರ್ತಿ ಪೂಜಿಸಿ ಹೊಲದ ಮರದಡಿ ಇಡುವ ಪದ್ಧತಿಯೂ ಇದೆ.

ಮಣ್ಣೆತ್ತಿನ ಹಬ್ಬಕ್ಕೆ ಲಕ್ಷ್ಮೇಶ್ವರದ 20ಕ್ಕೂ ಹೆಚ್ಚು ಕುಂಬಾರರ ಮನೆಗಳಲ್ಲಿ 3-4 ತಿಂಗಳಿಂದ ಸಿದ್ಧಗೊಳಿಸಿದ ಸಾವಿರಾರು ಸುಂದರ ಮಣ್ಣೆತ್ತಿನ ಮೂರ್ತಿಗಳಿಗೆ ಹತ್ತಾರು ಜಿಲ್ಲೆಗಳಿಂದ ಡಿಮ್ಯಾಂಡ್ ಇದೆ. ಪಟ್ಟಣದಿಂದ ಡಾವಣಗೆರೆ, ಹರಿಹರ, ರಾಣೆಬೆನ್ನೂರ, ಧಾರವಾಡ, ಶಿವಮೊಗ್ಗ, ಗದಗ, ಕೊಪ್ಪಳ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ಮೂರ್ತಿಗಳು ಮಾರಾಟವಾಗುತ್ತಿವೆ.

ತಿಂಗಳುಗಳ ಮೊದಲೇ ವಿಶೇಷ ಮಣ್ಣನ್ನು ಸಂಗ್ರಹಿಸಿ ಸಂಪ್ರದಾಯದಂತೆ ಹದ ಮಾಡಿ ಮೂರ್ತಿಗಳ ತಯಾರಿಕೆ ಮಾಡುತ್ತಾರೆ. ಈ ಮೂರ್ತಿಗಳಿಗೆ ಗಣೇಶ ಮೂರ್ತಿಗಳಂತೆ ಬಣ್ಣದ ಅಲಂಕಾರ ಮಾಡಿರುತ್ತಾರೆ. ಮೂರ್ತಿಗಳು ಕೆಳಗೆ ಬಿದ್ದರೂ ಒಡೆಯುವುದಿಲ್ಲ. ವರ್ಷಪೂರ್ತಿ ಇಟ್ಟರೂ ಬಣ್ಣ ಮಾಸುವುದಿಲ್ಲ. ಕೊಡುಗಳಿಗೆ ಕೊಂಬೆಣಸು, ಇಣಿಗವಚ, ಜೂಲಾ, ಕೊರಳಿಗೆ ಗಂಟೆ ಸರ, ಹಣೆಪಟ್ಟಿ, ಕಾಲ್ಗೆಜ್ಜೆ, ಮೂಗುದಾರ, ವಿಭೂತಿ, ಕಣ್ಣು, ಕಿವಿ, ಮೂಗು, ಬಾಯಿ ಬರೆದು ಮೂರ್ತಿಗಳನ್ನು ಚಂದಗಾಣಿಸುತ್ತಾರೆ.

ಇಲ್ಲಿನ ಜೋಡೆತ್ತಿನ ಸಣ್ಣ ಮೂರ್ತಿಗಳು ಸಣ್ಣ 50, ಮಧ್ಯಮ 80, 100, 200 ರೂಗಳಿಗೆ ಮಾರಿದರೆ ವಿಶೇಷವಾಗಿ ತಯಾರಿಸಿದ ಎತ್ತುಗಳಿಗೆ 500ರಿಂದ 1000, 2000 ರೂವರೆಗೂ ಮಾರಾಟವಾಗುತ್ತವೆ. ಪ್ರತಿವರ್ಷ ಲಕ್ಷ್ಮೇಶ್ವರ ಪಟ್ಟಣವೊಂದರಲ್ಲಿಯೇ 40 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಸಿದ್ಧಗೊಂಡು ಮಾರಾಟವಾಗುತ್ತವೆ.

ತಮ್ಮ ಜೀವನಾಡಿಯಾದ ಎತ್ತುಗಳ ಮೇಲೆ ರೈತರಿಗೆ ಅಪಾರ ಪ್ರೀತಿ. ಇತ್ತೀಚೆಗೆ ಯಂತ್ರೋಪಕರಣಗಳು ಕೃಷಿ ಕೆಲಸಕ್ಕೆ ಸಹಾಯಕವಾಗಿದ್ದರೂ ಎತ್ತುಗಳ ಅವಶ್ಯಕತೆ ತಳ್ಳಿಹಾಕದಂತಿದೆ. ರೈತರ ಎಲ್ಲ ಕಾರ್ಯಗಳಿಗೆ ಹೆಗಲು ಕೊಡುವ ಎತ್ತುಗಳಿಗೆ ಹಿಂದಿನಿಂದಲೂ ಪೂಜ್ಯನೀಯ ಸ್ಥಾನಮಾನವಿದ್ದು ಎತ್ತುಗಳು ರೈತರ ಮನೆಗೆ ಶೋಭೆ ಮತ್ತು ಮಂಗಳಕರವಾಗಿವೆ. ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಫಲವತ್ತಾಗಿ ಬರಲಿ ಮತ್ತು ತಮ್ಮ ಎತ್ತುಗಳಿಗೆ ಯಾವ ತೊಂದರೆ ಬಾರದಿರಲಿ. ಅವುಗಳಿಂದ ನಮ್ಮ ಬಾಳು ಹಸನಾಗಲೆಂಬ ಭಾವನೆಯಿಂದ ಈ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತದೆ

ವಿರೂಪಾಕ್ಷ ಆದಿ, ರಾಜಣ್ಣ ಹವಳದ.

ರೈತರು-ಲಕ್ಷ್ಮೇಶ್ವರ

“ವರ್ಷದಿಂದ ವರ್ಷಕ್ಕೆ ನಮ್ಮೂರ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಿದ್ಧಪಡಿಸಿದ ಮೂರ್ತಿಗಳಲ್ಲಿ ಬಹಳಷ್ಟು ಬೇರೆ ಜಿಲ್ಲೆ, ತಾಲೂಕುಗಳಿಗೆ ಮಾರಾಟ ಮಾಡಲಾಗುತ್ತದೆ. ಮಣ್ಣೆತ್ತಿನ ಮೂರ್ತಿಗಳ ಮಾರಾಟ ನಮ್ಮ ಬದುಕಿಗೆ ಆಸರೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೂರ್ತಿ ತಯಾರಿಕೆಗೆ ಅವಶ್ಯವಾದ ಮಣ್ಣಿನ ಕೊರತೆ ಕಾಡುತ್ತಿದೆ. ಮಣ್ಣಿರುವ ಸ್ಥಳದಿಂದ ತರಲು ಅರಣ್ಯ ಇಲಾಖೆಯ ನಿಯಮಾವಳಿ ಅತ್ಯಂತ ಕಷ್ಟದಾಯಕವಾಗಿದೆ. ರೈತರ ಸಂಪ್ರದಾಯಬದ್ಧ ಪೂಜೆಗೆ ಮಳೆರಾಯ ಕೃಪೆ ತೋರಲಿ. ಉತ್ತಮ ಮಳೆಬೆಳೆ ಬಂದು ಅನ್ನದಾತರ ಬದುಕು ಹಸನಾಗಲಿ”

ಅಭಿಷೇಕ ಕುಂಬಾರ,

ಪ್ರಕಾಶ ಕುಂಬಾರ.

ಮೂರ್ತಿ ತಯಾರಕರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!