ಕಾರವಾರ:– ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ಮ್ಯಾನ್ ಶ್ರೀಧರ್ ಅವರನ್ನು ಅಮಾನತು ಮಾಡಲಾಗಿದೆ. ನೆಲಮಂಗಲ ರೋಡ್ ರೇಜ್ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಧರ್ ಅವರನ್ನು ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ.
ಕಳೆದ 10 ವರ್ಷದಿಂದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ಮ್ಯಾನ್ ಆಗಿ ಶ್ರೀಧರ್ ಸೇವೆ ಸಲ್ಲಿಸುತ್ತಿದ್ದರು. ಇನ್ನು ಮೊನ್ನೆ ನೆಲಮಂಗಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಇವರು ಸಹ ಆರೋಪಿಯಾಗಿದ್ದು, ಮಂಗಳವಾರ ಜಾಮೀನು ಪಡೆದಿದ್ದರು. ಆದರೆ ಇದೀಗ ಡಿ.ಆರ್ ಪೊಲೀಸ್ ವಿಭಾಗದಲ್ಲಿ ಇವರ ಅಮಾನತು ಜೊತೆ ಗಣ್ಯ ವ್ಯಕ್ತಿಗಳಿಗೆ ಗನ್ಮ್ಯಾನ್ ಆಗಿರುವ ಜಿಲ್ಲೆಯ ಐದು ವರ್ಷಕ್ಕಿಂತ ಹೆಚ್ಚು ಸಮಯ ಸೇವೆ ಮಾಡುತ್ತಿರುವ ಗನ್ ಮ್ಯಾನ್ಗಳಿಗೆ ಸಹ ಇದೀಗ ಈ ಘಟನೆ ನಂತರ ವರ್ಗಾವಣೆ ಆದೇಶ ಮಾಡಲಾಗಿದ್ದು, ಹತ್ತು ಜನ ಗನ್ಮ್ಯಾನ್ಗಳಿಗೆ ಇಂದು ವರ್ಗಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶಿಸಿದ್ದಾರೆ.