ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ವರುಣ ದೇವನ ಕೃಪೆಗಾಗಿ ಹೋಬಳಿಯ ರೈತ ಸಮೂಹ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಉಡಿ ತುಂಬು ಕಾರ್ಯವನ್ನು ನೆರವೇರಿಸಿದರು.
ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ವಿಶೇಷವಾಗಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ದುರ್ಗಾದೇವಿ ಕೆರೆಯಲ್ಲಿ ದೊಡ್ಡದಾದ ಬಸವಣ್ಣನ ಮಣ್ಣಿನ ಮೂರ್ತಿಯನ್ನು ಸ್ಥಾಪಿಸಲಾಯಿತು. ಷಡಕ್ಷರಯ್ಯ ಬದ್ನಿಮಠ ಅವರ ನೇತೃತ್ವದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಕಳೆದ 35 ವರ್ಷಗಳಿಂದ ವರುಣ ದೇವನ ಕೃಪೆಗಾಗಿ ಪ್ರತಿ ಮುಂಗಾರು ಸಂದರ್ಭದಲ್ಲಿ ದಂಡಿನ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯ ನಡೆಯುತ್ತಾ ಬಂದಿದೆ.



