ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರಕ್ಕೆ ಸುಮಾರು 20 ದಿನಗಳಿಂದ ಕುಡಿಯುವ ನೀರಿನ ಅಭಾವ ಇದ್ದು, ಅಭಿವೃದ್ಧಿ ಹೊಂದಿದ ಪ್ರದೇಶದ ಜನರು ಮನೆಯಲ್ಲಿ ಕೊಳವೆ ಬಾವಿ ಹಾಗೂ ನೀರಿನ ಟ್ಯಾಂಕ್ ಹೊಂದಿದ್ದಾರೆ. ಅವರಿಗೆ ವ್ಯತ್ಯಾಸವಾಗದಿದ್ದರೂ, ನಗರದ ಶೇ.75ರಷ್ಟು ಜನರು ದಿನನಿತ್ಯ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರು 20 ದಿನಗಳಿಗೊಮ್ಮೆ ಪೂರೈಕೆಯಾಗುವುದರಿಂದ ಜನ ಸಾಮಾನ್ಯರು ತಮ್ಮ ಕೆಲಸಗಳನ್ನು ಬದಿಗೊತ್ತಿ ದುಡಿಮೆ ಕಳೆದುಕೊಂಡು ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ ನಗರಕ್ಕೆ ಕುಡಿಯುವ ನೀರು ಪೂರೈಸಲು ಇದುವರೆಗೂ ಯಾವುದೇ ಪರ್ಯಾಯ ಮಾರ್ಗ ಅನುಸರಿಸದಿರುವುದು ಗದುಗಿನ ಜನರ ದುರಾದೃಷ್ಟ. ಅಭಿವೃದ್ಧಿ ಹೊಂದಿದ ನಗರಗಳನ್ನು ವೀಕ್ಷಿಸಿದಾಗ ನಮ್ಮ ಗದಗ ನಗರ ಯಾವುದೋ ಶಾಪಕ್ಕೆ ಗುರಿಯಾದಂತೆ ಗೋಚರವಾಗುತ್ತದೆ. ಕಾರಣ, ಜಿಲ್ಲಾ ಉಸ್ತುವಾರಿ ಸಚಿವರು ಗದಗ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.



