ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಾ.ಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ತಾ.ಪಂ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸಲ್ಲಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, “ಯಾವುದೇ ಇಲಾಖೆಗಳ ಕೆಲಸಗಳ ಕುರಿತು ಸರಿಯಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರಬೇಕು. ಒಮ್ಮೆ ಮಾಡಿದ ಕ್ರಿಯಾಯೋಜನೆಯ ಅಡಿಯಲ್ಲಿ ಆ ಕಾಮಗಾರಿ ಪೂರ್ಣಗೊಳ್ಳಬೇಕು ಅರ್ಧ ಆಗುವ ರೀತಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಬಾರದು,” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಅಂಗನವಾಡಿ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಕಟ್ಟಡ ಪೂರ್ಣಗೊಂಡಿದ್ದರೂ ವಿದ್ಯುತ್ ಸಂಪರ್ಕ ಮತ್ತು ನೀರಿನ ಪೂರೈಕೆ ಇಲ್ಲ. ಇದಕ್ಕೆ ಅಪೂರ್ಣ ಕ್ರಿಯಾಯೋಜನೆಯೇ ಕಾರಣ. ಆದ್ದರಿಂದ ಸಂಬಂಧಿತ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ತಾಲೂಕಿನಲ್ಲಿ ಕೆಲವೆಡೆ ಜೆಜೆಎಂ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಮಸ್ಯೆ ತಿಳಿಸಿದ್ದಾರೆ. “ಈ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ?” ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.
ಇಲಾಖೆಯ ಎಇಇ ಮಲ್ಲಿಕಾರ್ಜುನ ಪಾಟೀಲ ಉತ್ತರಿಸಿ, “ಅಪೂರ್ಣ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಈಗಾಗಲೇ ಹಲವು ಬಾರಿ ನೋಟೀಸ್ ನೀಡಿದ್ದೇವೆ. ಅವರಿಂದ ಉತ್ತರ ಬರದಿದ್ದರೆ, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ,” ಎಂದು ತಿಳಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, “ಜೆಜೆಎಂ ಕಾಮಗಾರಿ ಯೋಜನೆಯಡಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಶೇ.50–60ರಷ್ಟು ಹಣ ಪಾವತಿ ಆಗಿದೆ. ಕೆಲಸ ಪೂರ್ಣ ಮಾಡಿದರೆ ಉಳಿದ ಹಣ ಪಾವತಿ ಮಾಡಲಾಗುವುದು. ಈ ಬಗ್ಗೆ ಗುತ್ತಿಗೆದಾರರಿಗೆ ಇಲಾಖೆಯಿಂದ ನೋಟೀಸ್ ನೀಡಲಾಗಿದೆ,” ಎಂದು ತಿಳಿಸಿದರು.
ಸಿಡಿಪಿಒ ಮೃತ್ಯುಂಜಯಪ್ಪ ಗುಡ್ಡದನ್ವೇರಿ, ಲೋಕೋಪಯೋಗಿ ಇಲಾಖೆಯ ಎಇಇ ಫಕ್ಕಿರೇಶ ತಿಮ್ಮಾಪುರ, ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
2025–26ನೇ ಸಾಲಿನಲ್ಲಿ ಆಯಾ ಇಲಾಖೆಗಳು ಕೈಗೊಳ್ಳಬೇಕಾದ ಕೆಲಸ ಕುರಿತು ಮುನ್ನೋಟ ಸಿದ್ಧಪಡಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅರಣ್ಯ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಯವರು ಇನ್ನೂ ತಮ್ಮ ಬೇಡಿಕೆ ಪಟ್ಟಿ ಕೊಟ್ಟಿಲ್ಲ. ಆದ್ದರಿಂದ ಸೆ.20ರೊಳಗಾಗಿ ತಮ್ಮ ಇಲಾಖೆಗಳ ಕೆಲಸಗಳ ಬೇಡಿಕೆ ಪಟ್ಟಿ ಸಿದ್ಧಪಡಿಸಿಕೊಡಬೇಕು ಎಂದು ಇಓ ಕೃಷ್ಣಪ್ಪ ಧರ್ಮರ ತಿಳಿಸಿದರು.



