ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಬಿ.ಎಸ್. ಈಳಿಗೇರ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿತು.
ಸಭೆಗೆ ಮುನ್ನ ಈಚೆಗೆ ನಿಧನರಾದ ಲಕ್ಷ್ಮೇಶ್ವರ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ.ಎಲ್. ಪೂಜಾರ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಮಾರಂಭದಲ್ಲಿ ಸಂಘದ ಆಜೀವ ಸದಸ್ಯರು ಮತ್ತು ಶಿರಹಟ್ಟಿ ತಾಲೂಕು ದೈಹಿಕ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ 75 ವಸಂತಗಳನ್ನು ಪೂರೈಸಿದ ಆರ್.ಎನ್. ಪಂಚಭಾವಿ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಪೂರ್ಣಾಜಿ ಖರಾಟೆ ಸಂಘದ ಬೆಳವಣಿಗೆ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಆರ್.ಎನ್. ಪಂಚಭಾವಿ ಮಾತನಾಡಿ, “ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಯಾವುದೇ ಹೊಗಳಿಕೆ-ತೆಗಳಿಕೆಗೆ ಬೆಲೆ ಕೊಡಬಾರದು. ನೀವು ಮಾಡುವ ಕೆಲಸ ನಿಮಗೆ ತೃಪ್ತಿ ಕೊಟ್ಟರೆ ಅದು ಭಗವಂತನಿಗೆ ಸಲ್ಲುತ್ತದೆ. ಜನ್ಮ ಕೊಟ್ಟ ತಂದೆ-ತಾಯಿಯರನ್ನು ಗೌರವದಿಂದ ಕಾಣಬೇಕು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಾಪುರಮಠ, ಸಿ.ಜಿ. ಹಿರೇಮಠ, ಐ.ಎನ್. ಹುಬ್ಬಳ್ಳಿ, ಆರ್.ಎನ್. ಸಾತಪುತೆ, ಎಸ್.ವಿ. ಅಂಗಡಿ ಮುಂತಾದವರು ಇದ್ದರು.



