ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನರಕಯಾತನೆ ಆಗಿದೆ. ಜೈಲಿನಲ್ಲಿ ಇರಲಾಗದೇ ಕಳೆದ ಬಾರಿ ಜಡ್ಜ್ ಬಳಿ ವಿಷ ಮೇಲಿದ್ದ ದರ್ಶನ್ ಗೆ ಜಡ್ಜ್ ಜೈಲಿನ ಮ್ಯಾನ್ಯುಯಲ್ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದರು. ಆದರೆ ಕೋರ್ಟ್ ಆದೇಶವಾದರೂ ದರ್ಶನ್ ಗೆ ಮಾತ್ರ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ದರ್ಶನ್ ಪರ ವಕೀಲರು ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂ ಆದೇಶದ ನಂತರ ಮತ್ತೆ ಜೈಲುಪಾಲಾಗಿರುವ ನಟ ದರ್ಶನ್ ಪರದಾಡುವಂತಾಗಿದೆ. ಇತ್ತೀಚಿಗಷ್ಟೇ ಕೋರ್ಟ್ ಹಾಸಿಗೆ, ದಿಂಬು ನೀಡುವಂತೆ ಆದೇಶಿಸಿದ್ದರೂ ಕೂಡ ಜೈಲಧಿಕಾರಿಗಳು ಯಾವುದೇ ಸೌಕರ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲರು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಗೂ ಕೋರ್ಟ್ ಆದೇಶ ಮಾಡಿದ್ರೂ ಯಾವುದೇ ಸೌಕರ್ಯ ನೀಡಿಲ್ಲ. ಕೋರ್ಟ್ ಆದೇಶದ ಪ್ರತಿಯನ್ನು ಇ-ಮೇಲ್ ಮಾಡಲಾಗಿದೆ. ಆದರೂ ದರ್ಶನ್‌ಗೆ ಅದೇ ನರಕ ಮುಂದುವರಿದಿದೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದ್ದೀವಿ. ಆದರೂ ಕೂಡ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆದು ಹೋಗಿದೆ. ಇನ್ನೂ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿದ್ದಾರೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್ ಅಲ್ಲಿ ಇರಿಸಬೇಕು. ಇನ್ನು ಬಿಸಿಲಿನ ವಿಚಾರಕ್ಕೆ ಸೂರ್ಯನನ್ನು ತರೋದಕ್ಕೆ ಆಗುತ್ತಾ ಅಂತ ಉತ್ತರಿಸುತ್ತಾರೆ. ಅದಲ್ಲದೇ ಹಾಸಿಗೆ, ದಿಂಬು ಏನನ್ನು ಕೊಡ್ತಿಲ್ಲ. ತುಂಬಾ ಕನಿಷ್ಠವಾಗಿ ನಡೆಸಿಕೊಳ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದೆ.



