ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.
ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳ ಜಾಮೀನು ಈ ಹಿಂದೆ ಸುಪ್ರೀಂಕೋರ್ಟ್ನಲ್ಲಿ ರದ್ದಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಗಳಾದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಜಾಮೀನನ್ನೂ ರದ್ದುಪಡಿಸಬೇಕೆಂದು ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಅಂತಿಮವಾಗಿ ಜಾಮೀನು ರದ್ದು ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಐವರು ಆರೋಪಿಗಳಿಗೆ ಸದ್ಯದ ಮಟ್ಟಿಗೆ ಜೈಲು ಭೀತಿ ತಪ್ಪಿದಂತಾಗಿದೆ.
ಆರೋಪಿ ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದರು. ಹೈಕೋರ್ಟ್ ಆದೇಶದೊಂದಿಗೆ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಸದ್ಯ ಈ ಬಹುಚರ್ಚಿತ ಕೊಲೆ ಪ್ರಕರಣದ ಟ್ರಯಲ್ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ.



