ಬೆಂಗಳೂರು: ಬಾಡಿಗೆ ಆಧಾರಿತ ವಾಹನ ಸೇವೆ ನೀಡುವ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿ ಕಳ್ಳತನ ಮಾಡಿದ್ದ ಆರೋಪದಡಿ ಮಲ್ಲೇಶ್ವರಂ ಪೊಲೀಸರು ಅಂತಾರಾಜ್ಯ ಖದೀಮನನ್ನು ಬಂಧಿಸಿದ್ದಾರೆ.
ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಬಂಧಿತ ಆರೋಪಿ. ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಅವರಿಗೆ ಸೇರಿದ ಸ್ವಿಫ್ಟ್ ಕಾರನ್ನು ಬಾಡಿಗೆ ಹೆಸರಿನಲ್ಲಿ ಪಡೆದು ವಾಪಸ್ ನೀಡದೆ ಪರಾರಿಯಾಗಿದ್ದ ಆರೋಪ ಈತನ ಮೇಲಿದೆ.
ಸೈಯದ್ ಕದೀರ್ ಪಾಷಾ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದರು. ಮನೆ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಸಮೀಪದ ರಸ್ತೆಯಲ್ಲಿ ಕಾರು ನಿಲ್ಲಿಸುತ್ತಿದ್ದರು. ಈ ವಾಹನವನ್ನು ತಮ್ಮ ಸಹೋದರ ಫೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್‌ನಲ್ಲಿ ನೋಂದಾಯಿಸಲಾಗಿತ್ತು.
ಏಪ್ರಿಲ್ 22ರಂದು ಆರೋಪಿ ಮಿಶೆಲ್ ಶಫೀಕ್ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿದ್ದ. ಅಗತ್ಯ ದಾಖಲೆಗಳಾದ ಚಾಲನಾ ಪರವಾನಗಿ ಹಾಗೂ ಆಧಾರ್ ಕಾರ್ಡ್ ಪರಿಶೀಲಿಸಿದ ಬಳಿಕ ಕಾರು ಹಸ್ತಾಂತರಿಸಲಾಗಿತ್ತು. ಆದರೆ ಒಂದು ದಿನಕ್ಕೆ ಬುಕ್ ಮಾಡಿದ್ದ ವಾಹನವನ್ನು ಆರೋಪಿ ನಿಗದಿತ ಅವಧಿಯಲ್ಲಿ ಹಿಂತಿರುಗಿಸದೇ ಪರಾರಿಯಾಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ವಾಹನ ಪತ್ತೆಗಾಗಿ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಸಾಧನವನ್ನು ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ನೀಡಿದ್ದ ವಿಳಾಸವನ್ನು ಪರಿಶೀಲಿಸಿದಾಗ ಆರೋಪಿ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಕಾರನ್ನು ಕೇರಳಕ್ಕೆ ಕೊಂಡೊಯ್ದು, ಜಿಪಿಎಸ್ ಹಾಗೂ ಫಾಸ್ಟ್‌ಟ್ಯಾಗ್ ಸಾಧನಗಳನ್ನು ತೆಗೆದುಹಾಕಿದ್ದಾನೆ. ಕಂಪನಿ ಸಂಪರ್ಕಿಸಿದಾಗ ಶೀಘ್ರದಲ್ಲೇ ವಾಹನವನ್ನು ಹಿಂತಿರುಗಿಸುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಬಳಿಕ ಕಾರನ್ನು ಮತ್ತೊಬ್ಬರಿಗೆ ನೀಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.
ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾರನ್ನು ಸ್ನೇಹಿತರಿಗೆ ನೀಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೇರಳದ ಕಣ್ಣೂರು ಹಾಗೂ ತ್ರಿಶೂರ್ ಭಾಗಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಆರೋಪಿಗೆ ಇರುವುದಾಗಿ ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದು, ಕಳುವಾಗಿರುವ ಕಾರು ಪತ್ತೆಗಾಗಿ ವಿಶೇಷ ತಂಡವನ್ನು ಕೇರಳಕ್ಕೆ ಕಳುಹಿಸಿದ್ದಾರೆ.



