ವಿಜಯಸಾಕ್ಷಿ ಸುದ್ದಿ, ಗದಗ: ಶೋಷಿತ ಸಮುದಾಯಗಳಲ್ಲಿ ಇತರ ಜಾತಿ ಹಾಗೂ ಧರ್ಮಗಳನ್ನು ಸೇರಿಸಿ ಶೋಷಿತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯವೆಂದು ಗದಗ ಜಿಲ್ಲಾ ವಾಲ್ಮೀಕಿ ಯುವ ಮುಖಂಡ ಪ್ರಶಾಂತ ನಾಯ್ಕರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾವಿರಾರು ವರ್ಷಗಳ ಕಾಲ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಗಾದ ಎಸ್‌ಟಿ ಸಮುದಾಯಗಳಲ್ಲಿ ಮತ್ತೊಂದು ಜಾತಿಯನ್ನು ಸೇರಿಸಿ ಶೋಷಿತ ಸಮುದಾಯದ ಪಾಲನ್ನು ಕಿತ್ತುಕೊಂಡು ನೈಜ ದಲಿತ ಸಮುದಾಯಕ್ಕೆ ಅನ್ಯಾಯವೆಸಗುತ್ತಿರುವ ಮುಖ್ಯಮಂತ್ರಿಗಳ ನಡೆ ದಲಿತ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಎಸ್‌ಟಿ ಸಮುದಾಯವನ್ನು ಸಮಾಜದ ಅಂಚಿಗೆ ತಳ್ಳುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿರುವದು ದುರಂತದ ಸಂಗತಿ.
ಕೂಡಲೇ ಮುಖ್ಯಮಂತ್ರಿಗಳು ತಮ್ಮ ದಲಿತ ವಿರೋಧಿ ನೀತಿಯನ್ನ ಕೈಬಿಡಬೇಕು. ಎಸ್‌ಟಿ ಸಮುದಾಯದಲ್ಲಿ ಇತರೇ ಜಾತಿಯನ್ನ ಸೇರಿಸದೇ ಇರುವ ಮೀಸಲಾತಿಯ ಲಾಭ ಶೋಷಿತ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



