HomeGadag Newsಕಾಯಕ ನಿಷ್ಠೆಗೆ ಇನ್ನೊಂದು ಹೆಸರೇ ವಿಶ್ವಕರ್ಮ: ಡಾ. ದುರಗೇಶ್ ಕೆ.ಆರ್

ಕಾಯಕ ನಿಷ್ಠೆಗೆ ಇನ್ನೊಂದು ಹೆಸರೇ ವಿಶ್ವಕರ್ಮ: ಡಾ. ದುರಗೇಶ್ ಕೆ.ಆರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ದೇಶದ ಬೆನ್ನೆಲುಬು ರೈತನಾದರೆ, ರೈತನಿಗೆ ಹೊಲದಲ್ಲಿ ಉಳುಮೆ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ಪೂರೈಕೆ ಮಾಡುವವರು ವಿಶ್ವಕರ್ಮ ಸಮಾಜದವರಾಗಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಬೆಳೆಸಿದವರು ವಿಶ್ವಕರ್ಮರು. ದೇಶದಲ್ಲಿ ವಿವಿಧ ಐತಿಹಾಸಿಕ ದೇವಾಲಯಗಳನ್ನು ನಿರ್ಮಾಣ ಮಾಡಿದ ಹಿರಿಮೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರಮ ಹಾಗೂ ಕಾಯಕ ನಿಷ್ಠೆಗೆ ಇನ್ನೊಂದು ಹೆಸರೇ ವಿಶ್ವಕರ್ಮರು. ವಿಶ್ವಕರ್ಮನೆಂಬುವನು ಇಲ್ಲದಿದ್ದರೆ ಈ ಜಗತ್ತಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ. ಸಕಲ ವಿದ್ಯೆಗಳು ವಿಶ್ವಕರ್ಮನಿಂದಲೇ ಬಂದಿವೆ. ವೇದೋಪನಿಷತ್ತುಗಳು ಸಹ ವಿಶ್ವಕರ್ಮನನ್ನು ಕೊಂಡಾಡಿವೆ ಎಂದರು.

ರಾಜ ವಿಷ್ಣುವರ್ಧನನು ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ರಾಜನಾಗಿದ್ದ. ಇವನ ರಾಣಿ ಶಾಂತಲೆಯು ಶಿಲ್ಪಕಲೆ ಹಾಗೂ ಸಂಸ್ಕೃತಿಯಲ್ಲಿ ಹೆಚ್ಚಿನ ಆಸಕ್ತಿಯುಳ್ಳವಳಾಗಿದ್ದಳು. ಬೇಲೂರಿನ ಚನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ನಿರ್ಮಾತೃ ವಿಶ್ವಕರ್ಮ ಸಮಾಜದ ಅಮರ ಶಿಲ್ಪಿ ಜಕಣಾಚಾರ್ಯವರಾಗಿದ್ದಾರೆ. ಈಗಿನ ಮಕ್ಕಳಿಗೆ ವಿಶ್ವಕರ್ಮರ ಮಾರ್ಗದರ್ಶನ ತಿಳಿಸಬೇಕು ಹಾಗೂ ಸಾಹಿತ್ಯದ ಒಲವನ್ನು ಬೆಳೆಸಲು ಪ್ರೇರೇಪಿಸಬೇಕು. ಎಲ್ಲರೂ ಕಾಯಕ ತತ್ವ ಬೆಳೆಸಿಕೊಳ್ಳಬೇಕು ಎಂದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ಸಂತಸದ ವಿಚಾರ. ಯಾವುದೇ ಸಾಧನೆಯಾಗಬೇಕಾದರೆ ಸಂಘಟನೆಯು ಬಹಳ ಮುಖ್ಯವಾಗಿರುತ್ತದೆ. ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿ ಮುಂದೆ ಬರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಗೋಪಾಲ ಬಡಿಗೇರ ಅವರು ರಚಿಸಿದ `ಶ್ರೀ ವಿಶ್ವಕರ್ಮ ಸ್ತುತಿಮಾಲಾ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ, ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಆರ್.ಡಿ. ಕಡ್ಲಿಕೊಪ್ಪ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೇಷ್ಠ ಶೈಲ ಸೋಮನಕಟ್ಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಶ್ರೀಧರ್ ಚಿನಗಡಿ, ಹರಿನಾಥಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವಕರ್ಮ ಸಮುದಾಯದ ಗಣ್ಯರು, ಹಿರಿಯರು ಹಾಜರಿದ್ದರು.

ಸುತಾರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.


ಬಾಕ್ಸ್:

ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಉಪನ್ಯಾಸ ನೀಡಿ, ರಾಜ್ಯ ಸರ್ಕಾರದ ಆದೇಶದನ್ವಯ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. “ಎಲ್ಲಿ ಶ್ರಮದ ಬೆವರ ಹನಿ ಇದೆಯೋ, ಅಲ್ಲಿ ನಾನು ಇದ್ದೇನೆ” ಎಂದು ವಿಶ್ವಕರ್ಮರು ಹೇಳುತ್ತಾರೆ. ವಿಶ್ವಕರ್ಮರು ಶ್ರಮಪ್ರಿಯರು, ಕಾಯಕಪ್ರಿಯರಾಗಿದ್ದಾರೆ. ವೇದ, ಪುರಾಣ, ಶೃತಿ-ಸ್ಮೃತಿಗಳಲ್ಲಿ, ಸರ್ವಜ್ಞರ ವಚನಗಳಲ್ಲಿಯೂ ಸಹ ವಿಶ್ವಕರ್ಮರ ಪ್ರಾಮುಖ್ಯತೆ ಬಗ್ಗೆ ಉಲ್ಲೇಖಿಸಲಾಗಿದೆ. ವಿಶ್ವಕರ್ಮನಿಲ್ಲದ ಜಗತ್ತು ಶೂನ್ಯ. ಸಕಲ ವಿದ್ಯೆಗಳು ವಿಶ್ವಕರ್ಮನಿಂದಲೇ ಬಂದಿವೆ. ವಿಶ್ವಕರ್ಮನಿಲ್ಲದಿದ್ದರೆ ಜಗತ್ತಿನ ಅಸ್ತಿತ್ವ ಇರುತ್ತಿರಲಿಲ್ಲ ಎಂದು ಸಂತ ಕವಿ ವೇಮನರು ತಿಳಿಸಿದ್ದಾರೆ. ಸಕಲ ಚರಾಚರ ವಸ್ತುಗಳಲ್ಲಿ ವಿಶ್ವಕರ್ಮ ಇದ್ದಾನೆ. ವಿಶ್ವಕರ್ಮರು ಕಾಯಕಯೋಗಿಗಳು ಎಂದು ವಿವರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!