ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳ ಹಾಡಿಗೆ ಧ್ವನಿಯಾಗಿರುವ ಖ್ಯಾತ ಗಾಯಕ ಜುಬೀನ್ ಗರ್ಗ್ ಸಿಂಗಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಜುಬೀನ್ ಮೃತಪಟ್ಟಿದ್ದಾರೆ.
ಸಿಂಗಾಪುರ ಪೊಲೀಸರು ಹೇಳುವಂತೆ ಜುಬೀನ್ ಅವರನ್ನು ಸಮುದ್ರದಿಂದ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ತೀವ್ರ ವೈದ್ಯಕೀಯ ಆರೈಕೆಯಲ್ಲಿ ಇರಿಸಲಾಗಿದ್ದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಸೆಪ್ಟೆಂಬರ್ 20 ರಂದು ಅವರು ಪ್ರದರ್ಶನ ನೀಡಬೇಕಿದ್ದ ಈಶಾನ್ಯ ಉತ್ಸವದಲ್ಲಿ ಭಾಗವಹಿಸಲು ಜುಬೀನ್ ಸಿಂಗಾಪುರಕ್ಕೆ ತೆರಳಿದ್ದರು. ಆದರೆ ಅವರ ಹಠಾತ್ ಸಾವು ಅಭಿಮಾನಿಗಳು ಮತ್ತು ಇಡೀ ಅಸ್ಸಾಮಿ ಸಮುದಾಯವನ್ನು ಆಘಾತಗೊಳಿಸಿದೆ. ಇದು ಭಾರತದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.
ಜುಬೀನ್ ಗರ್ಗ್ ಮೂಲತಃ ಅಸ್ಸಾಂನವರಾಗಿದ್ದು ಅಸ್ಸಾಮಿ ಸಿನಿಮಾಗಳ ಖ್ಯಾತ ನಟ ಆಗಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲದೆ ಹಲವಾರು ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್ಪುರಿ, ಭಿಷ್ಣುಪ್ರಿಯ ಮಣಿಪುರಿ ಇನ್ನೂ ಕೆಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದರು. ಎಆರ್ ರೆಹಮಾನ್ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಸಂಗೀತ ನಿರ್ದೇಶಕರುಗಳ ಮೆಚ್ಚಿನ ಗಾಯಕರಾಗಿದ್ದ ಜುಬೀನ್ ಸಾವು ಪ್ರತಿಯೊಬ್ಬರಿಗೂ ನೋವು ನೀಡಿದೆ.
ಕನ್ನಡದಲ್ಲಿ ಗಣೇಶ್ ನಟಿಸಿರುವ ‘ಹುಡುಗಾಟ’ ಸಿನಿಮಾದ ‘ಒಮ್ಮೊಮ್ಮೆ ಹೀಗೂ’, ‘ಮಹಾರುದ್ರ’ ಸಿನಿಮಾದ ‘ಅಮ್ಮಾ ನೀನು’, ‘ಪರಿಚಯ’ ಸಿನಿಮಾದ ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದಾರೆ. ಹಿಂದಿಯಲ್ಲಿ ‘ದಿಲ್ ಸೇ’ , ‘ಗ್ಯಾಂಗ್ಸ್ಟರ್’, ‘ಅಶೋಕಾ’, ‘ಕ್ರಿಶ್’,‘ಆನ್’, ಇನ್ನೂ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ‘ಗ್ಯಾಂಗ್ಸ್ಟರ್’ ಸಿನಿಮಾದ ‘ಯಾ ಆಲಿ’ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು, ‘ದಿಲ್ ಸೇ’ ಸಿನಿಮಾದ ‘ಪಾಕಿ ಪಾಕಿ ಪರದೇಸಿ’ ‘ಕಾಂಟೆ’ ಸಿನಿಮಾದ ‘ಮಾಹಿ ವೇ’ ಇನ್ನೂ ಹಲವು ಹಿಟ್ ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದರು.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಜುಬೀನ್ ಗಾರ್ಗ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. “ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿತು. ಜುಬೀನ್ ಅಸ್ಸಾಂಗೆ ಏನಾಗಿದ್ದರು ಎಂದು ವಿವರಿಸಲು ನನಗೆ ಪದಗಳು ಸಾಲುತ್ತಿಲ್ಲ. ಅವರು ತುಂಬಾ ಬೇಗನೆ ಹೋಗಿದ್ದಾರೆ, ಇದು ಹೋಗುವ ವಯಸ್ಸಾಗಿರಲಿಲ್ಲ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವಲ್ಲಿ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು. ಅವರ ಸಂಗೀತವು ನಮ್ಮ ಮನಸ್ಸು ಮತ್ತು ಆತ್ಮಗಳೊಂದಿಗೆ ನೇರವಾಗಿ ಮಾತನಾಡುತ್ತಿತ್ತು. ಅವರು ಎಂದಿಗೂ ತುಂಬಲಾಗದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.



