ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಹರಪನಹಳ್ಳಿ ರೈಲು ಮಾರ್ಗ 2014ರ ರೈಲ್ವೆ ಮುಂಗಡ ಪತ್ರದಲ್ಲಿ ಮಂಜೂರಾತಿ ಆಗಿದ್ದು, 2015ರಲ್ಲಿ ಕೇಂದ್ರ ರೈಲ್ವೆ ಬೋರ್ಡ್ನವರು ಸರ್ವೆ ಮಾಡಿ, ವೆಚ್ಚದಾಯಕವಾದ ಯೋಜನೆಯನ್ನು ಕೇಂದ್ರ ರೇಲ್ವೆ ಕಚೇರಿಯವರು ಕಾಯ್ದಿರಿಸಿದ್ದಾರೆ. ಆದರೆ ಈ ಸರ್ವೆ ವರದಿಯು ಅವೈಜ್ಞಾನಿಕವಾಗಿದೆ. ಗದಗ-ಹರಪನಹಳ್ಳಿ ರೈಲು ಮಾರ್ಗವನ್ನು ಮುಂಡರಗಿ-ಹೂವಿನಹಡಗಲಿ ಮಾರ್ಗವಾಗಿ ಅನುಷ್ಠಾನಗೊಳಿಸಲು ಆಗ್ರಹಿಸಿ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಶ.ದೇಸಾಯಿ ಮತ್ತು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಜಂಟಿ ಕ್ರಿಯಾಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಯಲ್ಲಪ್ಪ ನವಲಗುಂದ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಸಂಪೂರ್ಣ ವಿಫಲವಾಗಿವೆ. ಮುಂಡರಗಿ-ಹೂವಿನಹಡಗಲಿ ಮಾರ್ಗವಾಗಿ ಅನುಷ್ಠಾನಗೊಳಿಸಲು ಆಗ್ರಹಿಸಿ ಅ. 27ರಂದು ಗದಗ-ಬೆಟಗೇರಿ ರೈಲ್ವೆ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ರೈಲ್ವೆ ಪ್ರತಿಭಟನೆ ರ‍್ಯಾಲಿಯು ತೆರಳಿ, ಅ. 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ವ್ಹಿ.ಎಸ್. ಗಟ್ಟಿ, ಕಿಸಾನ್ ಜಾಗೃತಿ ವಿಕಾಸ ಜಿಲ್ಲಾ ಘಟಕದ ಧ್ರುವಕುಮಾರ ಹೂಗಾರ, ನಿಂಗಪ್ಪ ಭಂಡಾರಿ, ಕರಿಯಲ್ಲನಗೌಡ್ರ ಮುಂತಾದವರು ಉಪಸ್ಥಿತರಿದ್ದರು.



