ವಿಜಯಸಾಕ್ಷಿ ಸುದ್ದಿ, ಡಂಬಳ: ತಮ್ಮ ಸೇವೆಯ ಪ್ರಾರಂಭದಿಂದುದ ಹಿಡಿದು ಪ್ರಾಮಾಣಿಕ ಕಲಿಕೆಯ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ, ಬಸವೇಶ್ವರ ಪ್ರೌಢಶಾಲೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಬಸನಗೌಡ ಕ. ನಿಂಬನಗೌಡರ ಅವರಿಗೆ ಅ. 31ರಂದು ಸಂಜೆ 4ಕ್ಕೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಸನ್ಮಾನ ಜರುಗಲಿದೆ.
ಕಲ್ಲನಗೌಡ, ಪಾರ್ವತಮ್ಮ ಅವರು ಬಿ.ಕೆ. ನಿಂಬನಗೌಡರ ಅವರ ತಂದೆ ತಾಯಿಗಳು. ಧಾರವಾಡದ ಸರಕಾರಿ ಗಂಡು ಮಕ್ಕಳ ಶಾಲೆ, ಧಾರವಾಡದ ನ್ಯೂ ಇಂಗ್ಲೀಷ್ ಹೈಸ್ಕೂಲ್, ಕಾಲೇಜು ಶಿಕ್ಷಣದ ನಂತರ ಡಿ.ಎಂ.ಸಿ. ಡ್ರಾಯಿಂಗ್ ಮಾಸ್ಟರ್ ಸರ್ಟಿಫಿಕೇಟ್, ಕ್ರಾಫ್ಟ್ ಟೀಚರ್ ಕೋರ್ಸ್ ಪಡೆದರು. ನಂತರ ಮುತ್ತವ್ವ ಅವರನ್ನು ಕೈಹಿಡಿದರು.
ಡಂಬಳ ಗ್ರಾಮದ ಪ್ರತಿಷ್ಠಿತ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿ ಡಂಬಳ ಗ್ರಾಮದಲ್ಲಿ 13 ವರ್ಷ ಸೇವೆ ಸಲ್ಲಿಸಿದರು. ನಂತರ ಗದಗ ಬಸವೇಶ್ವರ ಪ್ರೌಢಶಾಲೆಯಲ್ಲಿ 15 ವರ್ಷಗಳ ಸೇವೆ. ಮತ್ತೆ ಡಂಬಳ ಗ್ರಾಮದ ತೋಂಟದಾರ್ಯ ಪ್ರೌಢಶಾಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಮತ್ತೆ ಬಸವೇಶ್ವರ ಪ್ರೌಢಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿ 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸುವುದರ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.
ಕರ್ನಾಟಕ ರಾಜ್ಯದ ವೃತ್ತಿ ಶಿಕ್ಷಕರ ಸಂಘದ ಸಹಾಯಕ ಕಾರ್ಯದರ್ಶಿಯಾಗಿ, ಪ್ರಸ್ತುತ ಗದಗ ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನೂರಾರು ಶಿಕ್ಷಕರ ಹಿತಕ್ಕಾಗಿ ಶ್ರಮಿಸಿದ ಶ್ರೇಯಸ್ಸು ಇವರದಾಗಿದೆ. ವಿದ್ಯಾರ್ಥಿಗಳು ಸಮಸ್ಯೆಯೆಂದು ಬಂದಾಗ ಅವರ ಕಲಿಕಾ ಸಹಾಯಕ್ಕೆ ನಿಂತು ಅವರನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಚಿತ್ರಕಲಾ ಬೋಧನಾ ಕೌಶಲ್ಯದ ಮೂಲಕ ಇವರು ಗ್ರಾಮೀಣ ಮಕ್ಕಳ ಆಶಾಕಿರಣವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ ಹಲವು ಉನ್ನತ ಹುದ್ದೆಗಳನ್ನು ಹೊಂದುವಂತೆ ಮಾಡಿದ್ದಾರೆ. ಚಿತ್ರಕಲಾ ತರಗತಿಗೆ ಜೀವ ತುಂಬಿದ ಗುರುಗಳೆಂದರೆ ಬಿ.ಕೆ. ನಿಂಬನಗೌಡರ. ಅವರ ಕಲೆಯನ್ನು ಕೇವಲ ಪಾಠವಲ್ಲ, ಜೀವನವನ್ನೇ ನೋಡುವ ದೃಷ್ಟಿಕೋನವೆಂದು ಕಲಿಸಿದ ಗುರುಗಳಾಗಿ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಮೂಡಿಸಲು ಶ್ರಮಿಸಿದವರು.
“ವಿದ್ಯಾರ್ಥಿಗಳು ಭವಿಷ್ಯ ನಿರ್ಮಿಸುವ ನಾಯಕರಾಗಿದ್ದು, ಅವರ ಕುರಿತು ಪ್ರತಿಯೊಬ್ಬರೂ ಚಿಂತನೆ ಮಾಡುವುದರ ಮೂಲಕ ಅವರ ಭವಿಷ್ಯವನ್ನು ಕಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು.
– ಬಿ.ಕೆ. ನಿಂಬನಗೌಡರ, ನಿವೃತ್ತಿ ಹೊಂದಲಿರುವ ಶಿಕ್ಷಕ”
“ವಿದ್ಯಾರ್ಥಿಗಳ ಉತ್ತಮ ಜೀವನ ನಿರ್ಮಿಸಲು ಗುರುಗಳಾದ ಬಿ.ಕೆ. ನಿಂಬನಗೌಡರ ಅವರು ಜಗದ್ಗುರು ತೋಂಟದಾರ್ಯ ಮಠದ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿ, ನಿರಂತರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುವುದರ ಮೂಲಕ ಉತ್ತಮ ಭವಿಷ್ಯ ಕಟ್ಟಿದ್ದಾರೆ”
– ಶಿವಾನಂದ ಪಟ್ಟಣಶೆಟ್ಟರ, ತೋಂಟದಾರ್ಯ ಮಠದ ಕಾರ್ಯದರ್ಶಿ.



