ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರತಿಯೊಬ್ಬರ ಜೀವನದಲ್ಲಿ ಆರೈಕೆದಾರರ ಪಾತ್ರ ಮಹತ್ವದಾಗಿದ್ದು, ವಿಶೇಷಚೇತನರ ಹಾಗೂ ಹಿರಿಯರನ್ನು ಆರೈಕೆ ಮಾಡುವುದು ವಿಶೇಷ ಸೇವೆಯಾಗಿದೆ. ಈ ಸೇವೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಅವರ ಸೇವೆ ಮಾಡುವ ಪೋಷಕರು, ಶಿಕ್ಷಕರು, ಆಯಾಗಳು ದೇವರ ಸಮಾನ ಎಂದು ಗದಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಕೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ಸ್ಪಿನಿಂಗ್ ಮಿಲ್ ಆವರಣದಲ್ಲಿರುವ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ವಿಶ್ವ ಆರೈಕೆದಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೈಕೆದಾರರಿಗೆ ಸರಿಯಾದ ಮಾಹಿತಿಯನ್ನು ನೀಡಿದಲ್ಲಿ ವಿಶೇಷಚೇತನರ ಬದುಕಿಗೆ ಬೆಳಕು ನೀಡಿದಂತಾಗುತ್ತದೆ. ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ಶಾಲೆಯು ಉತ್ತಮವಾದ ವಾತಾವರಣ ಹೊಂದಿದೆ. ಇಲ್ಲಿನ ಸ್ವಚ್ಛತೆ, ಶಾಲೆಯ ವಾತಾವರಣ ವಿಶೇಷ ಚೇತನ ಮಕ್ಕಳಿಗೆ ಕಲಿಯುವ ಆಸಕ್ತಿಯನ್ನು ಮೂಡಿಸುವಂತಿದೆ. ಆರೈಕೆದಾರ ಸೇವೆ ಶ್ಲಾಘನೀಯವಾಗಿದ್ದು, ಇಲಾಖೆ ವತಿಯಿಂದ ಪ್ರತಿ ತಿಂಗಳು 1000 ರೂ ವಿಶೇಷ ಭತ್ಯೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗುಡಗೇರಿ ಆದರ್ಶ ಶಾಲೆಯ ವಿ.ವಿ. ರಂಗನಗೌಡ್ರ ಮಾತನಾಡಿ, ವಿಶೇಷ ಚೇತನರ ಆರೈಕೆದಾರರಿಗೆ ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ತಾವು ಪಡೆದುಕೊಳ್ಳಬೇಕು ಮತ್ತು ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಜೀವನದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯೆ ನೀಲಮ್ಮ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಚಿಂತನೆಯ ಉದ್ದೇಶದಿಂದ ಇಂತಹ ಶಾಲೆಯನ್ನು ಸ್ಥಾಪಿಸಿದ್ದು, ಸೋಮೇಶ್ವರ ನೂಲಿನ ಗಿರಣಿಯ ಅಧ್ಯಕ್ಷರಾಗಿರುವ ಪುಲಕೇಶಿ ಉಪನಾಳ ಸೇರಿದಂತೆ ಅನೇಕರು ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಸರಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯ ದೊರೆತರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಮಕ್ಕಳ ಆರೋಗ್ಯದ ರಕ್ಷಣೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆ ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಥೆರಪಿಸ್ಟ್ ಆಗಮಿಸಿ ಸಲಹೆ ಸೂಚನೆ ನೀಡಿದರು. ಮಹಾಂತೇಶ ಅಗಸಿಮನಿ, ಕೊಪ್ಪಳದ ಆರೈಕೆದಾರರಾದ ವರ್ಷಾ, ಕೊಟ್ರಮ್ಮ, ಹೊಳಲಮ್ಮ ಮಣಿಕಟ್ಟಿ, ಸೋಮೇಶ್ವರ ನೂಲಿನ ಗಿರಣಿಯ ಅಧ್ಯಕ್ಷ ಪುಲಕೇಶಿ ಉಪನಾಳ, ಪ್ರಕಾಶ ಉಪನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಾರ್ವತಿ ಕಳ್ಳಿಮಠ ನಿರೂಪಿಸಿದರು. ವಿಶೇಷ ಶಾಲೆಯ ಸಿಬ್ಬಂದಿಗಳಾದ ಲಲಿತಾ ದಾಸಪ್ಪನವರ, ನೇತ್ರಾ, ಪ್ರಶಾಂತ ಎಸ್, ಬಿ. ಅಕ್ಕಮ್ಮ, ಗೌರಮ್ಮ, ರಾಜೇಶ್ವರಿ, ಹೇಮಾವತಿ, ಸವಿತಾ ಹಾಜರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವರ್ತಕ ಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ನಮ್ಮ ಭಾಗದಲ್ಲಿಯೇ ಅರಳು ವಿಶೇಷ ಅಗತ್ಯತೆಯುಳ್ಳ ಶಾಲೆ ಉತ್ತಮ ಕಾರ್ಯ ಮಾಡುತ್ತಿದ್ದು, ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆ ಇಲ್ಲಿ ಎದ್ದು ಕಾಣುತ್ತಿದೆ. ಇಂತಹ ಸಂಸ್ಥೆಗೆ ಸಹಕಾರ ನೀಡಬೇಕು ಎಂದರು.



