ನವದೆಹಲಿ:- ಸೋಮವಾರ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣದ ತನಿಖೆ ಭರದಿಂದ ಸಾಗಿದ್ದು, ಬೆಚ್ಚಿ ಬೀಳಿಸೋ ಸಂಗತಿಗಳು ಹೊರಬಿದ್ದಿದೆ.
ಸ್ಫೋಟಗೊಂಡ HR 26 CE 7674 ನೋಂದಣಿಯ i20 ಕಾರು ಮೊಹಮ್ಮದ್ ಸಲ್ಮಾನ್ ಎಂಬುವವರ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಣಿಯಾಗಿತ್ತು. ಗುರುಗ್ರಾಮದ ಶಾಂತಿನಗರ ನಿವಾಸಿ ಸಲ್ಮಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕಾರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಕ್ಲಾ ನಿವಾಸಿ ದೇವೇಂದರ್ ಅವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ತನಿಖೆಯನ್ನು ಮುಂದುವರಿಸಿದ ಪೊಲೀಸರಿಗೆ, ದೇವೇಂದರ್ ಕೂಡ ಕಾರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ತಾರೀಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಬೆಳವಣಿಗೆಯು ಪ್ರಕರಣಕ್ಕೆ ಪುಲ್ವಾಮಾ ನಂಟನ್ನು ಸೂಚಿಸಿದ್ದು, ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ. ಉಗ್ರರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ದೆಹಲಿ ಪೊಲೀಸರ ತಂಡವೊಂದು ತಾರೀಕ್‌ನ ಜಾಡು ಹಿಡಿದು ಪುಲ್ವಾಮಾಗೆ ತೆರಳಿದೆ.
ಸದ್ಯಕ್ಕೆ ಸಲ್ಮಾನ್ ಮತ್ತು ದೇವೇಂದರ್ ಅವರನ್ನು ವಶಕ್ಕೆ ಪಡೆದು, ಸ್ಫೋಟದ ಕಾರಣ, ಉದ್ದೇಶ ಮತ್ತು ಪಿತೂರಿಯ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ. ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ಅಧಿಕಾರಿಗಳು ಸಹ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಾರೆ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾವಿನ ಸಂಖ್ಯೆ 13ಕ್ಕೆ ಏರಿಕೆ!
ದೆಹಲಿಯ ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಪೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರಿಗೆ ಗಂಭೀರ ಗಾಯವಾಗಿದೆ. ಸ್ಫೋಟದ ತೀವ್ರತೆಯಿಂದಾಗಿ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.



