ಬೆಂಗಳೂರು: ಚಿನ್ನ ಮಾರಾಟ ಮಾಡಿ ಹಣ ಕೊಡೋದಾಗಿ ವಂಚನೆ ಆರೋಪ ಕೇಳಿ ಬಂದಿದ್ದು, ಹಲಸೂರು ಗೇಟ್ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೀರನ್ ಸಕಾರಿಯಾ ಮತ್ತು ರಾಜೇಂದ್ರ ಸಕಾರಿಯಾ ಬಂಧಿತ ಆರೋಪಿಗಳಾಗಿದ್ದು, ಹರ್ಷಿತ್.ಬಿ ಎಂಬುವವರಿಗೆ ವಂಚನೆ ಮಾಡಿದ್ದಾರೆ.
ಹಲಸೂರು ಗೇಟ್ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಹೊಂದಿರುವ ಹರ್ಷಿತ್. ಬಿ ಎಂಬುವರಿಗೆ ಪರಿಚಿತರಾಗಿದ್ದ ಆರೋಪಿಗಳು, ತಾವು ಚಿನ್ನವನ್ನು ಮಾರಾಟ ಮಾಡಿಕೊಡುವುದಾಗಿ ನಂಬಿಸಿದ್ದರು. ಕಳೆದ ಜುಲೈನಿಂದ ಸೆಪ್ಟಂಬರ್ ವರೆಗೂ ಹಂತಹಂತವಾಗಿ ಚಿನ್ನ ಪಡೆದಿದ್ದ ಆರೋಪಿಗಳು, ಹರ್ಷಿತ್ ಅವರಿಗೆ ಹಣ ನೀಡದೇ ವಂಚಿಸಿದ್ದರು.
ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹರ್ಷಿತ್ ಅವರು ಈ ಬಗ್ಗೆ ದೂರು ನೀಡಿದ್ದರು. ಹರ್ಷಿತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.60 ಕೋಟಿ ಮೌಲ್ಯದ 1300 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


