ಶಿವಮೊಗ್ಗ: ಬಾಂಬ್ ಸ್ಫೋಟದಂಥ ಸಂದಿಗ್ಧ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಒಂದೇ ಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು,
ಉಗ್ರಗಾಮಿ ಸಂಘಟನೆಗಳು ಇಷ್ಟು ಕೆಟ್ಟದಾಗಿ ನಡೆದುಕೊಳ್ಳಬೇಕಾದರೆ, ನಾವೆಲ್ಲರೂ ಭಾರತೀಯರು ಎಂಬ ಮನೋಭಾವದಿಂದ ದ್ವಂದ್ವ ಹೇಳಿಕೆ ನೀಡದೇ ದೇಶದ ಪರವಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿರುವುದು ಆದ್ಯತೆ ಆಗಬೇಕಿತ್ತು.
ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದರೂ ದೆಹಲಿಯ ಈ ಭಯೋತ್ಪಾದಕರ ದಾಳಿ ಕುರಿತು ತಮ್ಮ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಹಿರಿಯರು ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಬಿಹಾರ ಚುನಾವಣೆಯನ್ನು ಇದಕ್ಕೆ ಜೋಡಿಸುವ ಷಡ್ಯಂತ್ರ, ಕುತಂತ್ರವೂ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಇದು ಕಾಂಗ್ರೆಸ್ಸಿಗರ ಮೂರ್ಖತನದ ಪ್ರದರ್ಶನ ಮಾತ್ರವಲ್ಲ ದೇಶದ್ರೋಹದ ಕೆಲಸ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯರು, ದೇಶದ ಎಲ್ಲ ಮುಖಂಡರು ಇಂಥ ಸಂದಿಗ್ಧ ಸಂದರ್ಭದಲ್ಲಿ ಒಟ್ಟಾಗಿ ಯೋಚಿಸಬೇಕು ಎಂದು ಮನವಿ ಮಾಡಿದರು. ಮೊನ್ನೆ ನವದೆಹಲಿಯ ಕೆಂಪು ಕೋಟೆಯ ಹತ್ತಿರ ಕಾರಿನಲ್ಲಿ ಬಾಂಬ್ ಸ್ಫೋಟ ಆಗಿದ್ದು, ಇದು ಭಯೋತ್ಪಾದನಾ ದಾಳಿ ಎಂದು ತಿಳಿಸಿದರು.
ಗೃಹ ಸಚಿವ ಅಮಿತ್ ಶಾ ಜೀ ಅವರು ತಕ್ಷಣ ಅಲ್ಲಿಗೆ ಭೇಟಿ ಕೊಟ್ಟರು. ಮರುದಿನ ಪ್ರಧಾನಿ ನರೇಂದ್ರ ಮೋದಿ ಜೀ ಅವರೂ ಆಸ್ಪತ್ರೆಗಳಿಗೂ ಭೇಟಿ ಕೊಟ್ಟಿದ್ದಾರೆ. ಸಂಸತ್ ಭವನ, ಬಿಜೆಪಿ ಕೇಂದ್ರ ಕಚೇರಿ, ವಾಯು ಪಡೆ ಕಚೇರಿ, ಸೇನಾ ಭವನ ಮೊದಲಾದ ಪ್ರಮುಖ ಸ್ಥಳಗಳು ಟಾರ್ಗೆಟ್ ಪಟ್ಟಿಯÀಲ್ಲಿ ಇತ್ತೆಂದು ಬಹಿರಂಗವಾಗಿದೆ ಎಂದರು.


