ಕಲಬುರಗಿ:- ಜಿಲ್ಲೆಯ ಚಿತ್ತಾಪುರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಚರ್ಚೆಯಲ್ಲಿದ್ದ ಆರ್‌ಎಸ್‌ಎಸ್ ಪಥಸಂಚಲನ ಇಂದು ಶಾಂತಿಯುತವಾಗಿ ನೆರವೇರಿತು.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ತವರಿನಲ್ಲಿ ಭಗವಾ ಧ್ವಜ ಹಾರಿಸಿ ಕಾರ್ಯಕರ್ತರು ಬಾಜಾಜ್ ಕಲ್ಯಾಣ ಮಂಟಪದಿಂದ ಆರಂಭಿಸಿದ್ದ ಮೆರವಣಿಗೆ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ ರಸ್ತೆ ಸೇರಿದಂತೆ 1.25 ಕಿ.ಮೀ ದೂರ ಸಾಗಿ 47 ನಿಮಿಷಗಳಲ್ಲಿ ಮುಕ್ತಾಯವಾಯಿತು. ಹೈಕೋರ್ಟ್ ಆದೇಶದಂತೆ 300 ಗಣವೇಶಧಾರಿಗಳು ಮತ್ತು 50 ಬ್ಯಾಂಡ್ ವಾದಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಂದ ಪುಷ್ಪಾರ್ಚನೆ ಮೂಲಕ ಭವ್ಯ ಸ್ವಾಗತ ದೊರಕಿತು.
ಪಥಸಂಚಲನಕ್ಕೆ ಮಾರ್ಗಮಟ್ಟಿನಲ್ಲಿ 650 ಪೊಲೀಸ್ ಸಿಬ್ಬಂದಿ, 250 ಹೋಂ ಗಾರ್ಡ್, 44 ಸಿಸಿಟಿವಿ ಹಾಗೂ 5 ಡ್ರೋಣ್‌ಗಳ ನಿಗಾವನ್ನು ವ್ಯವಸ್ಥೆ ಮಾಡಲಾಗಿತ್ತು. ಪಟ್ಟಿಯಲ್ಲಿ ನಾಮನಿರ್ದೇಶಿತರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದ್ದು, ಹೊರ ಜಿಲ್ಲೆಗಳ ಕಾರ್ಯಕರ್ತರಿಗೆ ಅವಕಾಶ ಇರಲಿಲ್ಲ. ಒಟ್ಟಾರೆ RSS ಪಥ ಸಂಚಲನ ಶಾಂತಿಯುತವಾಗಿ ಜರುಗಿತು.



