ಗದಗ:- ಗುರು ಬ್ರಹ್ಮ, ಗುರು ವಿಷ್ಣು ಗುರುದೇವೋ ಮಹೇಶ್ವರ.. ಗುರು ಸಾಕ್ಷಾತ್ ಪರಬ್ರಹ್ಮ.. ತಸ್ಮೈ ಶ್ರೀ ಗುರುವೇ ನಮಃ.. ಈ ಸಾಲುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತದೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುವ ಗುರುಗಳನ್ನು ಗೌರವದಿಂದ ಕಾಣುತ್ತಾರೆ. ಶಿಕ್ಷಕರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ಜ್ಞಾನಾರ್ಜನೆಗೆ ಶ್ರಮಿಸುತ್ತಾರೆ. ಈ ನಡುವೆ ಗುರು ಶಿಷ್ಯರ ನಡುವೆ ಸಂಬಂಧ ಗಟ್ಟಿಯಾಗಿ ಬೆಳೆಯುತ್ತೆ. ಅದೇ ರೀತಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರಡಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ವರ್ಗಾವಣೆಗೊಂಡ ಹಿನ್ನೆಲೆ ಮಕ್ಕಳು ಕಣ್ಣೀರಿನ ಮೂಲಕ ಬೀಳ್ಕೊಟ್ಟಿದ್ದಾರೆ.
ಎಸ್, ಇಲ್ಲಿನ ಮುರಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ ಬೇರೊಂದು ಶಾಲೆಗೆ ಉಮೇಶ ತೊಂಡಿಹಾಳ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆ ತನ್ನ ನೆಚ್ಚಿನ ಶಿಕ್ಷಕನ ವರ್ಗಾವಣೆಯಿಂದ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದು, ಶಿಕ್ಷಕ ಉಮೇಶ್ ಕೂಡ ಗಳಗಳನೇ ಕಣ್ಣೀರು ಹಾಕಿದ್ದಾರೆ.
ಕಳೆದ 9 ವರ್ಷದಿಂದ ಮುರಡಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮೂಲಕ ಶಿಕ್ಷಕ ಉಮೇಶ್, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಬೋಧನೆ ಜೊತೆಗೆ ಮಕ್ಕಳೊಂದಿಗೆ ಬೆರೆತು ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಶಿಕ್ಷಕ ಉಮೇಶ್ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದಾರೆ. ಹೀಗಾಗಿ ವರ್ಗಾವಣೆಗೊಂಡಿರುವ ಶಿಕ್ಷಕ ಉಮೇಶ್ ಗೆ ಶಾಲಾ ಎಸ್ ಡಿಎಮ್ ಸಿ ಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮೈದಾನಕ್ಕೆ ಹಣೆ ಹಚ್ಚಿ ನಮಸ್ಕರಿಸಿ ಶಿಕ್ಷಕ ಉಮೇಶ್ ವಿದಾಯ ಹೇಳಿದ್ದಾರೆ.



