ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕುರುಬ ಸಮುದಾಯ ಹೊರತುಪಡಿಸಿ, ಹಿಂದುಳಿದ ವರ್ಗದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಯಾದವ ಸಮುದಾಯ ಹೊಂದಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಯಾದವ ಸಮುದಾಯದ ಡಿ.ಟಿ. ಶ್ರೀನಿವಾಸ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹರೀಶ ಪೂಜಾರ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಟಿ. ಶ್ರೀನಿವಾಸ್ ವಿದ್ಯಾವಂತ ರಾಜಕಾರಣಿ. ಯಾವುದೇ ಜವಾಬ್ದಾರಿ ನೀಡಿದರೂ ಅದಕ್ಕೆ ನ್ಯಾಯ ನೀಡುವ ಶಕ್ತಿಯನ್ನು ಅವರು ಹೊಂದಿದ್ದಾರೆ. ಶ್ರೀನಿವಾಸ ಅವರು ರಾಜ್ಯಾದ್ಯಂತ ಯಾದವ ಸಮುದಾಯವನ್ನು ಸಂಘಟಿಸಿದ್ದಾರೆ. ಪ್ರವರ್ಗ-1ರ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಜೀವನವನ್ನು ಸಂಘಟನೆಯಲ್ಲೇ ಕಳೆದಿದ್ದಾರೆ. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬರುತ್ತದೆ ಎಂದರು.
ರಾಜ್ಯದಲ್ಲಿ ಹಿಂದುಳಿದ ಪ್ರವರ್ಗ-1ರ ಒಟ್ಟು 95 ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು 95ಕ್ಕೂ ಹೆಚ್ಚು ಅತೀ ಹಿಂದುಳಿದ ಸಮಾಜಗಳನ್ನು ಸಂಘಟಿಸಿ ಅವರನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಡಿ.ಟಿ. ಶ್ರೀನಿವಾಸರನ್ನು ಕರ್ನಾಟಕ ರಾಜ್ಯದಲ್ಲಿ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದ ಸಮಾಜಗಳ ಪ್ರತಿನಿಧಿಯಾಗಿ ಸಚಿವ ಸ್ಥಾನ ನೀಡುವಂತೆ ಗದಗ ಜಿಲ್ಲಾ ಗೊಲ್ಲ (ಯಾದವ) ಹಾಗೂ ಸಮಸ್ತ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಮಾಜದಿಂದ ಮನವಿ ಮಾಡುತ್ತಿದ್ದೇವೆ ಎಂದರು.
ಸುದ್ಧಿಗೋಷ್ಠಿಯಲ್ಲಿ ವೈ.ಎಸ್. ಹಣಮರ, ಶ್ರೀನಿವಾಸ ಭಂಡಾರಿ, ವೆಂಕಟೇಶ ಪೂಜಾರ, ಗೋವಿಂದ ಪೂಜಾರ, ಸಹದೇವ ಕೋಟಿ ಮುಂತಾದವರು ಉಪಸ್ಥಿತರಿದ್ದರು.



