ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕಮಲಾ ವೆಂಕಪ್ಪ ಅಗಡಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ 70ನೇ ಕನ್ನಡ ರಾಜ್ಯೋತ್ಸವದ `ಅಗಡಿ ಕನ್ನಡ ಹಬ್ಬ’ದ ಅಂಗವಾಗಿ ಪ್ರಥಮ ದಿನವಾದ ಶುಕ್ರವಾರ ಕನ್ನಡ ನಾಡು-ನುಡಿಯ ಕಂಪು ಪಸರಿಸುವ ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಅದ್ದೂರಿಯಾಗಿ ಪ್ರಾರಂಭಿಸಲಾಯಿತು.
ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಅಗಡಿ ಕನ್ನಡ ಹಬ್ಬದ ಪ್ರಾರಂಭದ ದಿನದ ಸಂಭ್ರಮಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪ್ರಾ. ಡಾ. ಪರಶುರಾಮ ಬಾರಕಿ, ಲಕ್ಷ್ಮೇಶ್ವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಸೊರಟೂರ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನ ಕಳಸಾಪೂರ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ವಿವಿಧ ವಿಭಾಗಗಳ ನೂರಾರು ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಕಂಪು ಪಸರಿಸುವ ಸುಮಧುರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನೋಡುಗರ ಮನಸೂರೆಗೊಂಡರು. ಕನ್ನಡದ ಚಲನಚಿತ್ರ ಗೀತೆ, ಜಾನಪದ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿ ಕನ್ನಡ ನಾಡಿನ ವರ್ಣನೆ ಹಾಗೂ ಕನ್ನಡದ ಕಂಪನ್ನು ಕಾಲೇಜಿನ ಆವರಣದಲ್ಲಿ ಪಸರಿಸುವಂತೆ ಮಾಡಿದರು. ಈ ವೇಳೆ ಕಾಲೇಜಿನ ಅಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಎರಡನೇ ದಿನವಾದ ನ.29ರ ಮುಂಜಾನೆ 11.30ಕ್ಕೆ ಅಗಡಿ ಕನ್ನಡ ಹಬ್ಬ-2025ರ ಕಾರ್ಯಕ್ರಮವನ್ನು ಜಂತ್ಲಿ ಶಿರೂರದ ಹಿರಿಯ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ವಹಿಸಲಿದ್ದು, ಅಗಡಿ ಸನ್‌ರೈಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಶೇಖರ ಮೂಲಿಮನಿ, ಪ.ಪೂ ಕಾಲೇಜಿನ ಪ್ರಾಚಾರ್ಯೆ ಶುಭಾ ಡಿ ಉಪಸ್ಥಿತರಿರಲಿದ್ದಾರೆ ಎಂದು ಹಬ್ಬದ ಸಂಯೋಜಕರುಗಳಾದ ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ. ಈರಣ್ಣ ಮಕರಬ್ಬಿ, ಪ್ರೊ. ಪ್ರತಿಮಾ ಮಹಾಪುರುಷ ತಿಳಿಸಿದ್ದಾರೆ.



