ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕಷ್ಟ ಕೇಳಲು ಕಿವಿಯೂ, ನೋಡಲು ಕಣ್ಣೂ ಇಲ್ಲ, ಚರ್ಮವೂ ದಪ್ಪವಾಗಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಪಕ್ಷವಿರಲಿ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವ ಪರಿಸ್ಥಿತಿಯಲ್ಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಕಳೆದ 14 ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವೇದಿಕೆಯಲ್ಲಿಯೇ ಹಮ್ಮಿಕೊಳ್ಳಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳೆ ನಷ್ಟ, ಬೆಲೆ ಕುಸಿತದಂತಹ ಅನೇಕ ಸಮಸ್ಯೆಗಳಿಂದ ಅನ್ನದಾತನ ಬದುಕು ಸಂಕಷ್ಟದ ಸ್ಥಿತಿಯಲ್ಲಿದೆ. ರೈತರು ತಮ್ಮ ಅಸ್ತಿತ್ವಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ರಾಜ್ಯದ 19 ಜಿಲ್ಲೆಗಳ ರೈತರು ಮೆಕ್ಕೆಜೋಳದ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಲಕ್ಷ್ಮೇಶ್ವರದ ರೈತರ ಒಗ್ಗಟ್ಟಿನ ಹೋರಾಟ ಪ್ರೇರಣೆಯಾಗಿದೆ. ಮಠಾಧೀಶರು, ರೈತರ ಉಪವಾಸ ಸತ್ಯಾಗ್ರಹದಿಂದ ಎಚ್ಚೆತ್ತ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಹೇಳಿ 8 ದಿನಗಳೇ ಕಳೆದಿವೆ. ಸರ್ಕಾರದ ಸುಳ್ಳು ಭರವಸೆ ಮೊದಲೇ ತಿಳಿದ ರೈತರು ಖರೀದಿ ಕೇಂದ್ರ ಪ್ರಾರಂಭವಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿರುವುದು ನಿಜವಾಗಿದೆ ಎಂದರು.
ಚಳಿಗಾಲದ ಅಧಿವೇಶನದ ಮೊದಲ ದಿನವೇ ನಮ್ಮ ಪಕ್ಷದಿಂದ ಮೆಕ್ಕೆಜೋಳದ ಬಗ್ಗೆ ಧ್ವನಿ ಎತ್ತುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಕೇಂದ್ರ ಸರ್ಕಾರದ ಕೃಷಿ ಸಚಿವರೊಂದಿಗೆ ಮಾತನಾಡುತ್ತೇನೆ. ರೈತರ ನ್ಯಾಯಯುತ ಹೋರಾಟಕ್ಕೆ ಸದಾ ಬೆಂಬಲವಾಗಿರುತ್ತೇನೆ. ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ, ದೇಶಭಕ್ತಿ, ಶೌರ್ಯ, ಸ್ವಾಭಿಮಾನದ ಪ್ರತೀಕವಾದ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ರೈತರ ಹೋರಾಟದ ವೇದಿಕೆಯಲ್ಲಿ ಚನ್ನಮ್ಮನ ಜಯಂತಿ, ವಿಜಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಹೋರಾಟಕ್ಕೆ ಬೆಂಬಲವಾಗಿರುವ ಕುಮಾರ ಮಹಾರಾಜರು ಕಠಿಣ ಉಪವಾಸ ವೃತ ಕೈಗೊಳ್ಳುವುದು ಬೇಡ ಎಂದರು.
ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಸುಜಾತಾ ದೊಡ್ಡಮನಿ, ಈರಣ್ಣ ಕರಿಬಿಷ್ಠಿ, ಬಸಣ್ಣ ಬೆಟಗೇರಿ, ರವಿಕಾಂತ ಅಂಗಡಿ ಮಾತನಾಡಿದರು. ಹತ್ತಿಮತ್ತೂರಿ ಶ್ರೀ ನಿಜಗುಣ ಶಿವಯೋಗಿಗಳು, ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು, ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು, ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು, ಶಿವಪುರದ ಶ್ರೀ ಇಮ್ಮಡಿ ಮಹಾಂತ ಶಿವಯೋಗಿಗಳು ಉಪಸ್ಥಿತರಿದ್ದು ಮಾತನಾಡಿದರು. ಲಕ್ಷ್ಮೇಶ್ವರ ತಾಲೂಕ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಪ್ರವೀಣ ಬಾಳಿಕಾಯಿ, ಬಸವರಾಜ ತುಳಿ, ನಾಗರಾಜ ಚಿಂಚಲಿ, ವಸಂತಾ ಹುಲ್ಲತ್ತಿ, ಮಾಲಾದೇವಿ ದಂಧರಗಿ, ಕಾವ್ಯಾ ದೇಸಾಯಿ, ಪೂರ್ಣಾಜಿ ಖರಾಟೆ, ಮಲ್ಲಪ್ಪ ಬಸಾಪುರ, ದಾದಾಪೀರ ಮುಚ್ಚಾಲೆ, ನೀಲಪ್ಪ ಶರಸೂರಿ, ಶರಣು ಗೋಡಿ, ಹೊನ್ನಪ್ಪ ವಡ್ಡರ, ಮಲ್ಲೇಶಪ್ಪ ವಡ್ಡರ, ಬಸವರಾಜ ಹಿರೇಮನಿ, ಭರಮಪ್ಪ ಶರಸೂರಿ, ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ರೈತರು ಹಾಗೂ ಸಮಾಜ ಬಾಂಧವರು ಇದ್ದರು. ಕೊಣ್ಣೂರಿನ ಜಾನಪದ ಕಲಾ ತಂಡದವರು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ಎಂ.ಎಸ್. ದೊಡ್ಡಗೌಡರ ಪ್ರಾಸ್ತಾವಿಕ ನುಡಿದರು. ಚಂದ್ರು ಮಾಗಡಿ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ಜ. ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ಅಂದು ವೀರರಾಣಿ ಕಿತ್ತೂರು ಚನ್ನಮ್ಮ ತೆರಿಗೆ ಕಟ್ಟುವುದನ್ನು ವಿರೋಧಿಸಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರೆ, ಇಂದು ರೈತರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದು ದುರ್ದೈವದ ಪರಿಸ್ಥಿತಿ. ಮುಂಗಾರಿನ ಬೆಳೆಗಳೆಲ್ಲ ಹಾಳಾಗಿ ಮೆಕ್ಕೆಜೋಳದ ಬೆಳೆಯೇ ರೈತರ ಬದುಕಿಗೆ ಆಸರೆಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.



