ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎನ್ನುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಅಥವಾ ಮಾತು ತಪ್ಪಿದ ಮಗನಾಗಿ ಅಧಿಕಾರದಲ್ಲಿ ಮುಂದುವರಿಯಲಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಆ ಒಪ್ಪಂದದ ಪ್ರಕಾರ ಸಿಎಂ ಎರಡೂವರೆ ವರ್ಷದ ನಂತರ ಬೇರೆಯವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವ ಮಾತಿದೆ. ಈಗ ಸಿಎಂ ಕುರ್ಚಿಗಾಗಿ ನಡೆದಿರುವ ಚರ್ಚೆಯೇ ಸಾಕ್ಷಿಯಾಗಿದೆ ಎಂದರು.
ಆದರೆ ಮುಖ್ಯಮಂತ್ರಿ ಕುರ್ಚಿಯ ಹಗ್ಗಜಗ್ಗಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದರೂ ಖರೀದಿ ಕೇಂದ್ರ ಆರಂಭ ಮಾಡುತ್ತಿಲ್ಲ. ಭತ್ತ ಬೆಳೆಯುವ ರೈತರಿಗೆ ತುಂಗಭದ್ರಾ ಜಲಾಶಯದಿಂದ 2 ನೇ ಬೆಳೆಗೆ ನೀರು ಕೊಡುತ್ತಿಲ್ಲ. ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ರೈತರ ಕಡೆ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಗೊಂದಲದ ಗೂಡಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವುದು ಕಷ್ಟವಾಗಿದೆ. ಕೇವಲ ಕಾಟಾಚಾರಕ್ಕಾಗಿ ಬೆಳಗಾವಿ ಅಧಿವೇಶನ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿಪಕ್ಷದ ಎಲ್ಲ ನಾಯಕರು ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಉತ್ತರ ಕರ್ನಾಟಕ ಭಾಗದ ಅನೇಕ ಮುಖಂಡರು ಮುಖ್ಯಮಂತ್ರಿ ಆಗಿದ್ದಾರೆ. ಅವರೆಲ್ಲರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿಲ್ಲ. ಆದರೆ ಯಡಿಯೂರಪ್ಪ ಅವರು ಮಾತ್ರ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನಸೌಧ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯಲು ಕಾರಣರಾದರು. ಪ್ರತ್ಯೇಕ ಉತ್ತರ ಕರ್ನಾಟಕ ರಚನೆಗೆ ನನ್ನ ಸಹಮತವಿಲ್ಲ. ಕರ್ನಾಟಕ ಅಖಂಡವಾಗಿಯೇ ಇರಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರವಿ ದಂಡಿನ, ಎಂ.ಎಂ. ಹಿರೇಮಠ, ಕಿರಣ ಬೂಮಾ, ಎಚ್.ಎಸ್. ಶಿವನಗೌಡ ಮುಂತಾದವರು ಉಪಸ್ಥಿತರಿದ್ದರು.
ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರು ಡಿ.ಕೆ. ಶಿವಕುಮಾರ ಅವರಿಗೆ ಬೆಂಬಲ ನೀಡುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಸರ್ಕಾರವೇ ಗೊಂದಲ ಸೃಷ್ಟಿಸಿಕೊಂಡು ಮಧ್ಯಂತರ ಚುನಾವಣೆಗೆ ಸಿದ್ಧವಾಗಿದೆ. ಹೀಗಾಗಿ ಯಾರಿಗೋ ಬಾಹ್ಯ ಬೆಂಬಲ ಕೊಡುವುದಿಲ್ಲ. ಅವರಾಗಿಯೇ ಸರ್ಕಾರವನ್ನು ವಿಸರ್ಜಿಸಿದರೆ, ಅವರ ಜೊತೆ ಹೋಗುವುದಿಲ್ಲ. ಡಿ.ಕೆ. ಶಿವಕುಮಾರ ಜೊತೆ ಯಾವ ಕಾರಣಕ್ಕೂ ಬಿಜೆಪಿ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.



