ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಹುಯಿಲಗೋಳ ರಸ್ತೆಯ ಶ್ರೀ ಗೌರಿಶಂಕರ ದೇವಸ್ಥಾನದ ಕಾರ್ತಿಕೋತ್ಸವ ಅಂಗವಾಗಿ ಡಿ. 1ರಂದು ರಾತ್ರಿ 8ಕ್ಕೆ ಶ್ರೀ ಮೈಲಾರಲಿಂಗೇಶ್ವರ ಮಹಾತ್ಮೆ ದೊಡ್ಡಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸೂತ್ರದಾರ ಅಶೋಕ ಸುತಾರ ಹೇಳಿದರು.
ಶನಿವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿಗುಡಿ ಜನಪದ ಕಲಾಮೇಳದ ವತಿಯಿಂದ ಶ್ರೀ ಮೈಲಾರಲಿಂಗೇಶ್ವರ ಮಹಾತ್ಮೆ ಅರ್ಥಾತ್ ಮಣಿ ಮಲ್ಲಾಸುರರ ಸಂಹಾರ ಕುರಿತು ದೊಡ್ಡಾಟ ಪ್ರದರ್ಶನ ಜರುಗಲಿದೆ ಎಂದು ಹೇಳಿದರು.
ಕೂಡಲಸಂಗಮ ಧರ್ಮಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಉದ್ಘಾಟಿಸುವರು. ಗೌರಿಗುಡಿ ಓಣಿಯ ವೀರಶೈವ ಸಮಾಜದ ಅಧ್ಯಕ್ಷ ಕಾಶಣ್ಣ ಕುಂದಗೋಳ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸೋಮನಗೌಡ ಮಾಲಿಪಾಟೀಲ, ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮುಂತಾದವರು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಮುಖಂಡ ಸುಭಾಷ ಮಳಗಿ ಮಾತನಾಡಿ, ಉತ್ತರ ಕರ್ನಾಟಕದ ಗಂಡುಮೆಟ್ಟಿನ ದೊಡ್ಡಾಟ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ದೊಡ್ಡಾಟ ಕಲೆಯನ್ನು ಬೆಳೆಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೊಡ್ಡಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದೊಡ್ಡಾಟದ ಎಲ್ಲ ಅಭಿಮಾನಿಗಳು ದೊಡ್ಡಾಟ ಪ್ರದರ್ಶನ ವೀಕ್ಷಿಸಲು ಆಗಮಿಸಿ, ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸತೀಶ ಕುಂದಗೋಳ, ಶರಣಪ್ಪ ಅಣ್ಣಿಗೇರಿ, ಅಶೋಕ ಸುತಾರ, ಶಿವಾನಂದ ನಾಗರಾಳ, ಉಮೇಶ, ಪ್ರಶಾಂತಕುಮಾರ ಬೆಟಗೇರಿ ಮುಂತಾದವರು ಇದ್ದರು.



