ವಿಜಯಸಾಕ್ಷಿ ಸುದ್ದಿ, ಡಂಬಳ: ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ ಎಂದು ಪ್ರಾಚಾರ್ಯರಾದ ಉಮಾ ಸಿ.ಕೊಳ್ಳಿ ಹೇಳಿದರು.
ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲಾಭವನದ ಆವರಣದಲ್ಲಿ ಮುಂಡರಗಿಯ ಶ್ರೀ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಕ.ವಿ.ವಿ ರಾಷ್ಟಿಯ ಸೇವಾ ಯೋಜನೆ ಘಟಕ, ಜಿ.ಪಂ, ತಾ.ಪಂ ಡಂಬಳ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ರಾಷ್ಟಿಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಪ್ರಸ್ತುತ ದೇಶ-ವಿದೇಶಗಳ ನಡುವೆ, ಮನುಷ್ಯ- ಮನುಷ್ಯರ ನಡುವೆ ಅನೇಕ ಸಂಘರ್ಷಗಳು ನಡೆಯುತ್ತಿವೆ. ಇಂತಹ ಕಾಲದಲ್ಲಿ ಗಾಂಧಿಜೀಯವರ ತತ್ವಾದರ್ಶಗಳ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಡಂಬಳ ಗ್ರಾಮ ಐತಿಹಾಸಿಕ ಗ್ರಾಮವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಭೂಮಿಕೆಯನ್ನು ಹೊಂದಿದೆ. ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸಂಘಟನಾ ಮನೋಭಾವ ಬೆಳೆಸುತ್ತದೆ ಎಂದು ಹೇಳಿದರು.
ಪತ್ರಕರ್ತ ರಿಯಾಜಅಹ್ಮದ ದೊಡ್ಡಮನಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರವು ಅನುಭವ ಆಧಾರಿತ ಶಿಕ್ಷಣ ನೀಡುತ್ತದೆ. ಗ್ರಾಮೀಣ ಬದುಕು, ಸಂಸ್ಕೃತಿಯ ಪರಿಚಯ ಆಗಲಿದೆ. ಶಿಬಿರಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಹೊಂದಲಿದೆ. ಎನ್‌ಎಸ್‌ಎಸ್ ಶಿಬಿರಾರ್ಥಿಯು ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಲು ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಕವಿ ಗುಡದಪ್ಪ ತಳಗೇರಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವ ಹೊರಹೊಮ್ಮಲು ಸೂಕ್ತ ವೇದಿಕೆಯಾಗಿದೆ. ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.



