ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ದೇಶದ ಸಂವಿಧಾನವು ಸಮತೋಲವನ್ನು ಕಾಪಾಡುವ ಉದ್ದೇಶ ಹೊಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಉದ್ದೇಶ ಸಂವಿಧಾನದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವುದಾಗಿತ್ತು ಎಂದು ಸತೀಶ್ ಪಾಸಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2774ನೇ ಶಿವಾನುಭವದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು. ಸಮಾಜದಲ್ಲಿ ಅಸಮಾನತೆ, ಮೇಲು-ಕೀಳು ಭಾವನೆ, ನಿಮ್ನ ವರ್ಗದವರನ್ನು ಕೀಳಾಗಿ ಕಾಣುವುದು ಇನ್ನೂ ಇದೆ. ಜಾತೀಯತೆಯು ಎಲ್ಲ ಕಡೆಗೂ ತಾಂಡವವಾಡುತ್ತಿದೆ. ಅಂಬೇಡ್ಕರರ ಆಶಯ ಈಡೇರುತ್ತಿಲ್ಲ. ಅಂಬೇಡ್ಕರವರು ಮಾನವನನ್ನು ಮಾನವೀಯತೆಯಿಂದ ಕಾಣಿರಿ ಎಂದು ಹೇಳಿದ್ದಾರೆ. ಸಂವಿಧಾನದ ಮೂಲಕ ಸಮಾನತೆಯ ಸೌಧ ನಿರ್ಮಿಸುವ ಉದ್ದೇಶವನ್ನು ಅಳವಡಿಸಿದರು. ಸಂವಿಧಾನವೇ ನಮಗೆ ಪವಿತ್ರ ಗ್ರಂಥ. ನಮ್ಮದು ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನ ದಿನಾಚರಣೆ ಸಾರ್ಥಕ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಬಿ.ಕೆ. ನಿಂಬನಗೌಡ್ರರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅಭಿಷೇಕ ಹುಬ್ಬಳ್ಳಿ, ವಚನ ಚಿಂತನವನ್ನು ಶ್ರದ್ಧಾ ಹೂಲಿ ಪ್ರಸ್ತುತಪಡಿಸಿದರು. ರಾಜೇಶ್ವರಿ ಕರ್ಜಗಿ ಶೆಟ್ಟರ್ ದಾಸೋಹ ಸೇವೆಯನ್ನು ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರಮನ್ ಶಿವಾನಂದ ಹೊಂಬಳ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಮಾತನಾಡಿ, ಆ ಜಾತಿ-ಈ ಜಾತಿ ನೂರೆಂಟು ಜಾತಿಗಳ ಜಂಜಾಟ ಬಿಟ್ಟು ಸಂವಿಧಾನದ ಮೂಲ ಆಶಯವಾದ ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಷ್ಟ್ರದ ಸಮೃದ್ಧ ಕಲ್ಪನೆಗೆ, ಬಲಿಷ್ಟ ಭಾರತ ನಿರ್ಮಾಣಕ್ಕೆ ಭಾರತೀಯರೆಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.



