HomeBelgaumಚಳಿಗಾಲದ ಅಧಿವೇಶನ ಆರಂಭ | ಅಗಲಿದ ಗಣ್ಯರಿಗೆ ಸಂತಾಪ ಸೂಚನೆ | ಎಸ್.ಎಲ್. ಭೈರಪ್ಪನವರ ಸ್ಮಾರಕ...

ಚಳಿಗಾಲದ ಅಧಿವೇಶನ ಆರಂಭ | ಅಗಲಿದ ಗಣ್ಯರಿಗೆ ಸಂತಾಪ ಸೂಚನೆ | ಎಸ್.ಎಲ್. ಭೈರಪ್ಪನವರ ಸ್ಮಾರಕ ನಿರ್ಮಾಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣ ವಿಧಾನಸೌಧ: ಸರ್ಕಾರದಿಂದ ಶತಾಯುಷಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ಹಾಗೂ ಮೈಸೂರಿನಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ವಿಧಾನಸಭೆಯ ಹಾಲಿ ಸದಸ್ಯ ಹೆಚ್.ವೈ. ಮೇಟಿ, (ಹುಲ್ಲಪ್ಪ ಯಮನಪ್ಪ ಮೇಟಿ) ಮಾಜಿ ಸದಸ್ಯ ಆರ್.ವಿ. ದೇವರಾಜ್, ಶಿವಶರಣಪ್ಪಗೌಡ ಪಾಟೀಲ್, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಎಂ.ಎಸ್. ಉಮೇಶ್ ಅವರಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಸಂತಾಪ ಸೂಚಿಸಿ ನಿರ್ಣಯ ಮಂಡಿಸಿದರು. ನಿರ್ಣಯ ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

114 ವರ್ಷ ಜೀವಿಸಿದ್ದ ಸಾಲುಮರದ ತಿಮ್ಮಕ್ಕ ಮರ-ಗಿಡಗಳನ್ನೇ ತಮ್ಮ ಮಕ್ಕಳು ಎಂದು ಭಾವಿಸಿದ್ದರು. ಅವರ ಕೊನೆಗಾಲದಲ್ಲಿ ನಾನು ಭೇಟಿಯಾದ ಸಂದರ್ಭದಲ್ಲಿ ಬೇಲೂರು ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವಂತೆ ಪತ್ರ ನೀಡಿದ್ದರು. ಸರ್ಕಾರ ತಿಮ್ಮಕ್ಕನವರ ಕೋರಿಕೆ ಈಡೇರಿಸಲು ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇಶ ಕಂಡ ಶ್ರೇಷ್ಠ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರದು ಸರಳ ವ್ಯಕ್ತಿತ್ವ. 1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎಸ್.ಎಲ್. ಭೈರಪ್ಪನವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಸಹ ಅವರ ಸಾಹಿತ್ಯಿಕ ಕೊಡುಗೆಗಳನ್ನು ವೈಯಕ್ತಿಕವಾಗಿ ಗೌರವದಿಂದ ಕಾಣುತ್ತಿದ್ದೆ. ಕೆಲವು ಕಾದಂಬರಿಗಳನ್ನು ಸಹ ಓದಿದ್ದೇನೆ. ಸರ್ಕಾರದ ಮೂಲಕ ಮೈಸೂರಿನಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ನಿರ್ಮಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಮನೆಯಲ್ಲಿ ಎಸ್.ಎಲ್. ಭೈರಪ್ಪ ತಮ್ಮ ಕೊನೆಯ ದಿನಗಳನ್ನು ಕಳೆದರು. ವಿಶ್ವವಾಣಿ ಪತ್ರಿಕೆ ಮೂಲಕ ಆಯೋಜಿಸಿದ್ದ ಪ್ರವಾಸಿ ಪ್ರಪಂಚ ಕಾರ್ಯಕ್ರಮದಲ್ಲಿ ಭೈರಪ್ಪನವರನ್ನು ಭೇಟಿಯಾಗಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಹೆಚ್.ವೈ. ಮೇಟಿ ಎಲ್ಲಾ ಜಾತಿ-ಜನಾಂಗದ ಜನರ ಪ್ರೀತಿ ಅಭಿಮಾನವನ್ನು ಗಳಿಸಿದ್ದರು. 1983ರಿಂದ ನನಗೆ ಮೇಟಿ ಅವರ ಒಡನಾಟವಿದ್ದು, ನನ್ನ ನಿಷ್ಠಾವಂತ ಅನುಯಾಯಿಯಾಗಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಇವರು, ಬಿಲ್‌ಕೆರೂರು ಮಂಡಳ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ಮೊದಲಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದರು.

ವಿಧಾನಸಭೆಯ ಮಾಜಿ ಸದಸ್ಯ ಆರ್.ವಿ. ದೇವರಾಜ್ 3 ಬಾರಿ ಶಾಸಕರಾಗಿದ್ದರಲ್ಲದೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 11ನೇ ವಿಧಾನಸಭೆ ಸದಸ್ಯರಾಗಿದ್ದ ಯಲಬುರ್ಗಾದ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಹಾಗೂ ಖ್ಯಾತ ಹಾಸ್ಯನಟ ಎಂ.ಎಸ್. ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗಲಿದ ಗಣ್ಯರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಗೃಹ ಸಚಿವ ಪರಮೇಶ್ವರ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಸಿ.ಎಮ್. ನರೇಂದ್ರಸ್ವಾಮಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಸಿದ್ದು ಸವದಿ, ಎಂ.ಟಿ. ಕೃಷ್ಣಪ್ಪ, ಅಪ್ಪಾಜಿ ನಾಡಗೌಡ, ಹೆಚ್.ಸಿ. ಬಾಲಕೃಷ್ಣ, ಸುರೇಶ್, ಶ್ರೀನಿವಾಸಯ್ಯ ಎನ್, ಸಿ.ಕೆ. ರಾಮಮೂರ್ತಿ, ಮಹೇಶ್ ಟೆಂಗಿನಕಾಯಿ, ಡಾ. ರೂಪಕಲಾ ಸೇರಿದಂತೆ ಹಲವು ಶಾಸಕರು ಮಾತನಾಡಿದರು. ಮೃತ ಗಣ್ಯರ ಗೌರವಾರ್ಥ ವಿಧಾನಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ, ಗೌರವ ಸಲ್ಲಿಸಲಾಯಿತು.

ವಿಧಾನಸಭೆ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಘೋಷಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಹೆಚ್.ವೈ. ಮೇಟಿ ಅವರು ಬಡವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದರು. ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜ್ಯದ ಎಲ್ಲೆಡೆ ಉದ್ಯಾನವನ್ನು ನಿರ್ಮಿಸುವ ಮೂಲಕ ಅರಣ್ಯ ಇಲಾಖೆ ಶ್ಲಾಘನೀಯ ಕಾರ್ಯ ಮಾಡಿದೆ. ತಿಮ್ಮಕ್ಕ ಅವರ ಪುತ್ಥಳಿ ಸ್ಥಾಪಿಸುವುದು ಅಥವಾ ರಸ್ತೆಗೆ ಅವರ ಹೆಸರನ್ನು ಇಟ್ಟುವುದು ಇಂತಹ ಕ್ರಮಗಳಿಗಿಂತಲೂ, ಉದ್ಯಾನವನಗಳನ್ನು ನಿರ್ಮಿಸಿ, ಅವುಗಳಿಗೆ ತಿಮ್ಮಕ್ಕನವರ ಹೆಸರು ಇಟ್ಟಿರುವುದು ಸಾರ್ಥಕವೆನಿಸಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!