ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಂಸ್ಕೃತ ಭಾರತೀ ಗದಗ ಜಿಲ್ಲೆ ಹಾಗೂ ಪಂಚಾಕ್ಷರಿ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಗೀತಾ ಜಯಂತಿಯು ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾದ ಆಯುರ್ವೇದ ವೈದ್ಯ ಡಾ. ರಾಘವೇಂದ್ರ ಕುಬೇರ ಮಾತನಾಡಿ, ಯಾರು ಪ್ರಾಣಾಯಾಮವನ್ನು ಸರಿಯಾಗಿ ತಿಳಿದು ಮಾಡುತ್ತಾರೋ ಅವರಿಗೆ ಸರ್ವ ರೋಗ ನಿವಾರಣೆ ಆಗುತ್ತದೆ. ಯಾರು ತಿಳಿಯದೆ ಮಾಡುತ್ತಾರೋ ಅವರಿಗೆ ಸರ್ವ ರೋಗ ಜಮಾವಣೆ ಆಗುತ್ತದೆ ಎಂದರು.
ವಿಡಿಎಸ್ ಬಾಲಿಕೆಯರ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಮತ್ತು ಸಂಸ್ಕೃತ ಭಾರತೀ ಪೂರ್ಣಕಾಲಿಕ ಸ್ಥಾನೀಯ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಮಾತನಾಡಿ, ಭಗವದ್ಗೀತೆಯನ್ನು ಸರಿಯಾಗಿ ತಿಳಿಯಲು ಸಂಸ್ಕೃತ ಜ್ಞಾನ ಅಗತ್ಯ. ಸಂಸ್ಕೃತ ಭಾರತೀ ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದ ದಿ. ಪ್ರೊ. ರವೀಂದ್ರ ಕೊಪ್ಪರ ಅವರ ನೇತೃತ್ವದಲ್ಲಿ ಬೀದಿ ನಾಟಕದ ಮೂಲಕ ಸಂಸ್ಕೃತ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲಾ ಸಂಯೋಜಕ ಎಸ್.ಎನ್. ಶಿಂಪಿಗೇರ ಮಾತನಾಡಿ, ಸಂಸ್ಕೃತ ಭಾರತೀ ಬೆಳೆದು ಬಂದ ಬಗೆಯನ್ನು ತಿಳಿಸಿದರು. ನಗರ ಶಿಕ್ಷಣ ಪ್ರಮುಖರಾದ ಶೈಲಜಾ ಕುಲಕರ್ಣಿ ಗೀತಾ ಅಧ್ಯಯನ ಮಾಡಿಸಿದರು. ಗಂಗಾಧರ ತೆಗ್ಗಿನಮಠ, ನಿರ್ಮಲಾ ಭಾವಿ, ರೇಖಾ ಮಡಿವಾಳ ಹಾಗೂ ಮೌನೇಶ ಭಜಂತ್ರಿ ಉಪಸ್ಥಿತರಿದ್ದರು. ಬನ್ನಿ ಮಹಾಂಕಾಳಿ ಸಮಿತಿಯ ಪ್ರವೀಣ ಜಮಖಂಡಿ, ಸುನೀಲ್ ಹಲಕುರ್ಕಿ, ವಿಜಯಕುಮಾರ ಕಟ್ಟಿ, ಪರಶು ಪುರಾಣಿಕಮಠ, ಪಂಚಾಕ್ಷರಿ ಪಾಟೀಲ, ಹನುಮಂತಗೌಡ ಮತಗಟ್ಟಿ ಮುಂತಾದವರು ಹಾಜರಿದ್ದರು.



