ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಖಾಸಗಿ ಶಾಲೆಗಳಲ್ಲಿ ಶಾಲಾ ವಾಹನಗಳ ನಿರ್ವಹಣೆ ಮತ್ತು ಮಕ್ಕಳ ಬಗ್ಗೆ ಕಾಳಜಿಗೆ ಕ್ರಮ ವಹಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಲೋಕೇಶ ಸುತಾರ, ಡಿ. 17ರಂದು ದೊಡ್ಡೂರ ಗ್ರಾಮದ ಹೊರವಲಯದಲ್ಲಿ ಶಾಲಾ ವಾಹನದಿಂದ ಬಾಲಕನೋರ್ವ ಬಿದ್ದು ಸಾವನಪ್ಪಿರುವ ದುರ್ಘಟನೆ ನೋವಿನ ಸಂಗತಿ. ಇದು ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಚಾಲಕ-ನಿರ್ವಾಹಕರ ಬೇಜಾವಾಬ್ದಾರಿಯಿಂದ ನಡೆದ ಘಟನೆಯಾಗಿದೆ. ಶಾಲಾ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ದುಪ್ಪಟ್ಟು ಮಕ್ಕಳನ್ನು ತುಂಬಿಸಲಾಗುತ್ತಿದೆ. ಚಾಲನಾ ಪರವಾನಗಿ ಇಲ್ಲದ ಚಾಲಕ-ನಿರ್ವಾಹಕರನ್ನು ನೇಮಿಸಲಾಗಿರುತ್ತದೆ. ವಾಹನಗಳನ್ನು ಸ್ಪರ್ಧೆಗಿಳಿದಂತೆ ರಬ್ಬರಬ್ಬರಿ ಚಲಾಯಿಸಲಾಗುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಎಲ್ಲ ಖಾಸಗಿ ಶಾಲಾ-ಕಾಲೇಜುಗಳಿಗೆ ಶಿಸ್ತುಬದ್ಧ ಕ್ರಮಗಳನ್ನು ಪಾಲಿಸುವಂತೆ ತಾಲೂಕಾಡಳಿತ ಆದೇಶಿಸಬೇಕು. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ಇಂತಹ ಘಟನೆಗಳು ಸರ್ಕಾರಿ ಬಸ್‌ಗಳಲ್ಲಿ ನಿತ್ಯ ನಡೆಯುತ್ತಿದ್ದು, ಈ ರೀತಿ ದುರ್ಘಟನೆ ನಡೆದರೆ ನೇರವಾಗಿ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದರು.
ಈ ವೇಳೆ ಕರವೇ ಕಾರ್ಯಕರ್ತರಾದ ಪ್ರವೀಣ ಗಾಣಗೇರ, ಬಸವರಾಜ ಮಲ್ಲೂರ, ಗಂಗಾಧರ ಕೊಂಚಿಗೇರಿಮಠ, ಅರುಣ ಮೆಕ್ಕಿ, ಪ್ರಕಾಶ ಕೊಂಚಿಗೇರಿಮಠ, ಗಂಗಾಧರ ಕರ್ಜೇಕಣ್ಣವರ, ಗಣೇಶ ಮತ್ತಿತರರಿದ್ದರು.



