ವಿಜಯಸಾಕ್ಷಿ ಸುದ್ದಿ, ಗದಗ: ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ಬಹುಸಂಖ್ಯಾತ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಆಡಳಿತ ಮುಕ್ತಗೊಳಿಸಿ ಭಾರತದ ಸಂವಿಧಾನಕ್ಕೆ ಪೂರಕವಾದ ಪ್ರಜಾಪ್ರಭುತ್ವ ಆಡಳಿತ ಸ್ಥಾಪಿಸಲು ಜಾತ್ಯಾತೀತ ಶಕ್ತಿಗಳು ಇಂದು ಒಂದಾಗುವ ಕಾಲ ಸನ್ನಿಹಿತವಾಗಿದೆ. ದೇಶದ ಬಹುಸಂಖ್ಯಾತರ ಅಭಿವೃದ್ಧಿಗೆ ಮಾರಕವಾದ ಕೋಮುವಾದಿ ಸರಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಮತ್ತೊಮ್ಮೆ 1947ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಬೇಕು ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ ಹೇಳಿದರು.
ಅವರು ನಗರದ ಗಾಂಧಿ ವೃತ್ತದಲ್ಲಿ ಸಂಘಟಿಸಿದ್ದ ಸಮತಾ ರಾಜ್ಯದ ಕನಸುಗಳೊಂದಿಗೆ ಶ್ರಮ ಶಕ್ತಿಯ ಸಂಘರ್ಷದ ಶತಮಾನದ ಪಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಜ್ಯಾದ್ಯಂತ ಸಿಪಿಐ ಶತಮಾನೋತ್ಸವ ಜಾಥಾ ಸಂಚರಿಸುತ್ತಿದ್ದು, ಡಿ. 23ಕ್ಕೆ ಜಾಥಾ ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. ರಾಜ್ಯಾದ್ಯಂತ ಜಾತ್ಯಾತೀತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿ ಕೋಮುವಾದ ಹಿಮ್ಮೆಟ್ಟಿಸುವ ಶಪಥ ಮಾಡಿದ್ದಾರೆ ಎಂದು ತಿಳಿಸಿದರು.
ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ದಲಿತ ಮುಖಂಡ ವೆಂಕಟೇಶಯ್ಯ,
ದಲಿತ ನಾಯಕರಾದ ಸತೀಶ ಹೂಲಿ, ರಮೇಶ ಬಾಳಮ್ಮನವರ, ನಾರಾಯಣಸ್ವಾಮಿ, ಎಐಸಿಯುಟಿ ನವಲೂರ, ಸಿಪಿಐನ ಷಣ್ಮುಖಸ್ವಾಮಿ, ಸತೀಶ ಪಾಸಿ, ವಾಸುದೇವ ಹುಣಸಿಮರದ, ಬಸವರಾಜ ಪೂಜಾರ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಕಲಾಮಂಡಳಿ ಹಾಗೂ ಸಿಪಿಐ ಕಲಾ ತಂಡದಿಂದ ಕ್ರಾಂತಿಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ದಿ. ಬಿ. ಬಾಬು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.



