ವಿಜಯಸಾಕ್ಷಿ ಸುದ್ದಿ, ಧಾರವಾಡ: ಪೋಲಿಯೋ ಮುಕ್ತ ಸಮಾಜ ರೂಪಿಸಲು ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ಈ ಮೂಲಕ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಪೋಲಿಯೋ ಮುಕ್ತ ಸಮಾಜ ರೂಪಿಸಲು ಶ್ರಮಿಸಬೇಕೆಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಅವರು ಭಾನುವಾರ ಬೆಳಿಗ್ಗೆ ಧಾರವಾಡ ನಗರದ ಮಹಾನಗರಪಾಲಿಕೆ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶವನ್ನು ಪೋಲಿಯೋ ಮುಕ್ತವಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬ ಪೋಷಕರು ಪಡೆದುಕೊಳ್ಳಬೇಕು. ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ವ್ಯವಸ್ಥಿತವಾಗಿ ಅಭಿಯಾನವನ್ನು ಸಂಘಟಿಸಲಾಗಿದೆ. ಜಿಲ್ಲೆಯ ಮೂಲೆ ಮೂಲೆಗೂ ಲಸಿಕೆ ತಲುಪಿಸುವ ಉದ್ದೇಶದಿಂದ ಒಟ್ಟು 891 ಪಲ್ಸ್ ಪೋಲಿಯೋ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಲಭ್ಯವಿದ್ದು, ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿದರು.
ಪೋಲಿಯೋ ಎಂಬುದು ಮಾರಕ ಕಾಯಿಲೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವುದು ಅತ್ಯಗತ್ಯ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿದ್ದರೆ ಅವರನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆತಂದು ಪೋಲಿಯೋ ಹನಿ ಹಾಕಿಸಿ. ಸರ್ಕಾರದ ಈ ಬೃಹತ್ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಈ ಬಾರಿಯ ಅಭಿಯಾನದಲ್ಲಿ ಕೇವಲ ಮೂರು ದಿನಗಳ ಅವಧಿಯಲ್ಲಿ ಒಟ್ಟು 2 ಲಕ್ಷದ 7 ಸಾವಿರ ಮಕ್ಕಳನ್ನು ತಲುಪಿ, ಪೋಲಿಯೋ ಲಸಿಕೆ ನೀಡುವ ಬೃಹತ್ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ತಲುಪಲು ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮಗುವಿಗೂ ಲಸಿಕೆ ತಲುಪುವಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಅವರು ಹೇಳಿದರು.
ಹಿರಿಯ ಮಕ್ಕಳ ತಜ್ಞ ವೈದ್ಯ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಪೋಲಿಯೋ ಹರಡಲು ಯಾವುದೇ ವೈರಸ್ ಅಥವಾ ಅಧಿಕೃತ ಅನುಮತಿಯ ಅಗತ್ಯವಿಲ್ಲ. ಇದು ಪಕ್ಕದ ದೇಶಗಳಿಂದ ಅಥವಾ ರಾಜ್ಯಗಳಿಂದ ಅತ್ಯಂತ ವೇಗವಾಗಿ ಸಂಚರಿಸಬಲ್ಲದು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆಯ ರೇಖಾ ಬಾಡಗಿ ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ.ಎಚ್.ಓ ಅಧಿಕಾರಿ ಡಾ. ಸುಜಾತಾ ಹಸವೀಮಠ ವಂದಿಸಿದರು.
ವೇದಿಕೆಯಲ್ಲಿ ಮಹಾನಗರಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಸುರೇಶ ಬೇದ್ರೆ, ಆರೋಗ್ಯ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಡಾ. ಎಚ್.ಆರ್. ಪುಷ್ಪಾ, ರಾಜ್ಯ ನೋಡಲ್ ಅಧಿಕಾರಿ ಡಾ.ಉಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಮಹಾನಗರಪಾಲಿಕೆ ಧಾರವಾಡ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶ್ವಿನಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ. ಶಶಿಧರ ಕಳಸೂರಮಠ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು 2014ರಲ್ಲಿ ಭಾರತವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿತು. ಸತತ ಮೂರು ವರ್ಷಗಳ ಕಾಲ ದೇಶದಲ್ಲಿ ಯಾವುದೇ ಹೊಸ ಪೋಲಿಯೋ ಪ್ರಕರಣಗಳು ವರದಿಯಾಗದ ಕಾರಣ, ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿತು. ಆದರೂ ಅಪಾಯದ ಭೀತಿ ಮಾತ್ರ ಇನ್ನೂ ಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಹೇಳಿದರು.



