ಶಿವಮೊಗ್ಗ: ಪ್ರಯಾಣಿಕರಿಂದ ನಿರಂತರ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ, ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗ–ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಏಪ್ರಿಲ್ 30ರಂದು ಮಧ್ಯಾಹ್ನ 2.30ಕ್ಕೆ ಈ ಮಾರ್ಗದ ಕೊನೆಯ ವಿಮಾನ ಹಾರಾಟ ನಡೆಸಿದ್ದು, ಇದರೊಂದಿಗೆ 33 ತಿಂಗಳ ಸೇವೆಗೆ ತೆರೆ ಬಿದ್ದಂತಾಗಿದೆ.
ಇಂಡಿಗೋ ಸಂಸ್ಥೆ 2023ರ ಆಗಸ್ಟ್ 11ರಂದು ಶಿವಮೊಗ್ಗ–ಬೆಂಗಳೂರು ನಡುವೆ ಮೊದಲ ಸೇವೆ ಆರಂಭಿಸಿತ್ತು. ಈ ಸೇವೆಯಿಂದ ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿತ್ತು. ಕಳೆದ 33 ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯ ಪ್ರಯೋಜನ ಪಡೆದುಕೊಂಡಿದ್ದರು.
ಇದೀಗ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆಂಗಳೂರು–ಶಿವಮೊಗ್ಗ ಮಾರ್ಗದ ಟಿಕೆಟ್ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಿದ್ದು, ಸೇವೆ ಪುನರಾರಂಭದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
ಸೇವೆ ಸ್ಥಗಿತಕ್ಕೆ ಕಾರಣಗಳೇನು?
ಉಡಾನ್ ಯೋಜನೆಯಡಿ ರಾಜಧಾನಿಗೆ ಸಂಪರ್ಕ ಕಲ್ಪಿಸುವಲ್ಲಿ ಕೆಲವು ನಿರ್ಬಂಧಗಳು ಎದುರಾಗಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದರ ಜೊತೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಜಾರಿಗೊಳಿಸಿರುವ ಹೊಸ ನಿಯಮಗಳಿಂದ ಪೈಲಟ್‌ಗಳು ಹಾಗೂ ಸಿಬ್ಬಂದಿ ಕೊರತೆ ಉಂಟಾಗಿದೆ ಎನ್ನಲಾಗಿದೆ.
ಈ ಹಿಂದೆ ಶಿವಮೊಗ್ಗ–ಬೆಂಗಳೂರು ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಇಂಡಿಗೋ ನಡುವೆ ಒಪ್ಪಂದವಾಗಿದ್ದು, ಪ್ರತಿ ಟಿಕೆಟ್‌ಗೆ ರಾಜ್ಯ ಸರ್ಕಾರ 500 ರೂಪಾಯಿ ಸಹಾಯಧನ ನೀಡುತ್ತಿತ್ತು. 2025ರ ಆಗಸ್ಟ್‌ನಲ್ಲಿ ಈ ಒಪ್ಪಂದ ಅವಧಿ ಮುಕ್ತಾಯಗೊಂಡಿದ್ದರೂ ಇಂಡಿಗೋ ಸೇವೆಯನ್ನು ಮುಂದುವರಿಸಿತ್ತು. ಆದರೆ ಒಪ್ಪಂದ ನವೀಕರಣದಲ್ಲಿ ವಿಳಂಬವಾಗಿರುವುದು ಕೂಡ ಸೇವೆ ಸ್ಥಗಿತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ. ವಿಶೇಷವಾಗಿ ಮಳೆಗಾಲದಲ್ಲಿ ಲ್ಯಾಂಡಿಂಗ್ ಸಮಸ್ಯೆಗಳು ಹಾಗೂ ವಿಮಾನ ರದ್ದತಿ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.



