ಬೆಂಗಳೂರು: ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಆಡಳಿತವಲ್ಲ, ಸಂಘಟಿತ ಲೂಟಿ ಎಂದು ಟೀಕಿಸಿರುವ ಅವರು, ಚುನಾವಣೆ ವೇಳೆ ಜನರನ್ನು ದಾರಿ ತಪ್ಪಿಸಿ ಬಳಿಕ ಬೆಲೆ ಏರಿಕೆಯ ಹೊರೆ ಹಾಕುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಚುನಾವಣೆಗಳು ಮುಗಿದ ತಕ್ಷಣವೇ ಕೇಂದ್ರ ಸರ್ಕಾರ ಮತ್ತೊಮ್ಮೆ ದರ ಏರಿಕೆ ಮಾಡಿದೆ ಎಂದು ಆರೋಪಿಸಿದರು. ಚುನಾವಣೆ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ದರ ಏರಿಕೆಯನ್ನು ತಡೆಹಿಡಿದಿದ್ದ ಸರ್ಕಾರ, ಮೇ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಪರಿಣಾಮವಾಗಿ ಒಂದು ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿಗೆ ತಲುಪಿದೆ ಎಂದು ಸಿಎಂ ಉಲ್ಲೇಖಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಆರು ಬಾರಿ ಏರಿಕೆ ಮಾಡಿದ್ದು, ಇದರಿಂದ ಸಾಮಾನ್ಯ ಜನರ ಮೇಲೆ 1,518 ರೂಪಾಯಿಯಷ್ಟು ಹೆಚ್ಚುವರಿ ಹೊರೆ ಬಿದ್ದಿದೆ ಎಂದು ದೂರಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳು ಎದುರಾದಾಗ ದೇಶದ ಜನರನ್ನು ರಕ್ಷಿಸುವ ಬದಲು ಕೇಂದ್ರ ಸರ್ಕಾರ ಜನರ ಮೇಲೆಯೇ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯದಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬಿದ್ದಿದ್ದು, ಅದರ ಬೆಲೆಯನ್ನು ಇದೀಗ ಸಾಮಾನ್ಯ ಭಾರತೀಯರು ಪಾವತಿಸುತ್ತಿದ್ದಾರೆ ಎಂದು ಹೇಳಿದರು.
ಈ ದರ ಏರಿಕೆ ಕೇವಲ ವ್ಯಾಪಾರ ವಲಯಕ್ಕೆ ಮಾತ್ರ ಸೀಮಿತವಾಗದೇ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣ ಆಹಾರ ಮಳಿಗೆಗಳು ಹಾಗೂ ಅಡುಗೆ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಆತಂಕ ಎದುರಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.



