ವಿಜಯಸಾಕ್ಷಿ ಸುದ್ದಿ, ಗದಗ: ವಚನಗಳು ಕೇವಲ ಧಾರ್ಮಿಕ ಕಾವ್ಯವಲ್ಲ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಮಾನವೀಯತೆ ಈ ನಾಲ್ಕು ಮಾನವ ಹಕ್ಕುಗಳ ಮೂಲತತ್ವಗಳನ್ನು ವಚನಗಳು 12ನೇ ಶತಮಾನದಲ್ಲಿಯೇ ಘೋಷಿಸಿತ್ತು. ಆದ್ದರಿಂದ ವಚನಗಳು ಭಾರತದ ಮೊದಲ ಮಾನವ ಹಕ್ಕುಗಳ ಸಂವಿಧಾನ ಎಂದು ಭೈರನಹಟ್ಟಿಯ ಪೂಜ್ಯ ಶ್ರೀ ಮ.ನಿ.ಪ್ರ ಶಾಂತಲಿಂಗ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2776ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವರ್ಗ, ವರ್ಣ, ಲಿಂಗ ಭೇದ-ಭಾವ ಮಾಡದೇ ಮಾನವ ಹಕ್ಕುಗಳನ್ನು ಕೊಟ್ಟವರು ಶರಣರು. ತಮ್ಮ ವಚನಗಳ ಮೂಲಕ ಸಮಾನತೆಯ ಪರಿಕಲ್ಪನೆಯೇ ಅದ್ಭುತ. ಬಲಗೈ ಶ್ರೇಷ್ಠ, ಎಡಗೈ ಕೂಡ ಶ್ರೇಷ್ಠ ಎಂಬ ತತ್ವ ಸಾರಿ ದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುವುದನ್ನು ತಪ್ಪಿಸಿದರು. 26ಕ್ಕಿಂತಲೂ ಹೆಚ್ಚು ದೇಶಗಳು ಮಾನವ ಹಕ್ಕುಗಳನ್ನು ಒಪ್ಪಿಕೊಂಡಿವೆ. ಪ್ರತಿ ವಚನದ ಒಂದಾದರೂ ಸಾಲು ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಹಿರಿಯ ನಾಗರಿಕರಿಗೆ ಕೊಡುವ ಗೌರವ ಡಾಕ್ಟರೇಟ್ ಮತ್ತು ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಭೀಮರೆಡ್ಡಿ ದೇವರಡ್ಡಿ ಕಿಲಬನವರ ಅವರನ್ನು ಸನ್ಮಾನಿಸಲಾಯಿತು. ಆರಾದ್ಯ ಕುನಾಲ್ ಅಳ್ಳೊಳ್ಳಿ ಇವರಿಂದ ಸಂಗೀತ ಸೇವೆ ನಡೆಯಿತು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಸೂರಜಗೌಡ ಜಿ.ಮರಿಗೌಡ್ರ ಹಾಗೂ ವಚನ ಚಿಂತನವನ್ನು ಕೃತಿಕಾ ಜಿ.ಮರಿಗೌಡ್ರ ನಿರ್ವಹಿಸಿದರು. ದಾಸೋಹ ಸೇವೆಯನ್ನು ರವೀಂದ್ರ ಸಂಗನಬಸಪ್ಪ ಗದಗ ಹಾಗೂ ಶರಣು ವಿರೂಪಾಕ್ಷಪ್ಪ ಗದಗ ಮತ್ತು ವೈಭವ ಗದಗ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ವಚನಗಳಲ್ಲಿ ಮಾನವ ಹಕ್ಕುಗಳು ವಿಷಯ ಕುರಿತು ಮಾತನಾಡುತ್ತಾ, ಇದರ ಪರಿಕಲ್ಪನೆ ಆಕಾಶದಷ್ಟು ಅಗಲ, ಸಮುದ್ರದಷ್ಟು ಆಳ. ಶರಣರು 12ನೇ ಶತಮಾನದಲ್ಲಿಯೇ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಮಾನವನಿಗೆ ಗೌರವ ಇರಬೇಕು ಎಂದರು. ಸಮಾಜಕ್ಕೆ ಅದ್ಭುತವಾದ ಆಲೋಚನೆಗಳನ್ನು ಬಸವಣ್ಣನವರು ಕೊಟ್ಟರು. ಅನುಭವ ಲೌಕಿಕ, ಅನುಭಾವ ಅಧ್ಯಾತ್ಮಿಕ. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ. ದಿನನಿತ್ಯದ ವ್ಯವಹಾರವೇ ಅನುಭಾವ. ಶರಣರ ಅನುಭಾವವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.



