ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೈಕುಂಠ ಏಕಾದಶಿಯ ದಿನದಂದು ಪಟ್ಟಣದ ಸವಣೂರ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಆಚರಣೆ-ಸಂಪ್ರದಾಯಗಳು ನೆರವೇರಿದವು.
ಪಟ್ಟಣದ ದಿ. ವೆಂಕಪ್ಪ ಅಗಡಿ ಕುಟುಂಬದಿಂದ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಮಾದರಿಯಲ್ಲಿಯೇ ನಿರ್ಮಿತವಾದ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಶ್ರೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ಸಂಗೀತ ಕಾರ್ಯಕ್ರಮ, ವೆಂಕಟೇಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವ, ಪ್ರಸಾದ ಸೇವೆ ನೆರವೇರಿತು.
ವೈಕುಂಠ ಏಕಾದಶಿಯಂದು ವೈಷ್ಣವ ರೂಪದ ಶ್ರೀ ವೆಂಕಟೇಶ್ವರನ ದರ್ಶನ, ಉಪವಾಸ ವೃತಾಚರಣೆ ಮಾಡುವುದರಿಂದ ಕಷ್ಟ ಕಾರ್ಪಣ್ಯಗಳು ಕಳೆದು ನೆಮ್ಮದಿ, ಶಾಂತಿ, ಪುಣ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ದರ್ಶನಾಶೀರ್ವಾದ ಪಡೆದರು ಎಂದು ದೇವಸ್ಥಾನದ ಡಾ. ಅರುಣಕುಮಾರ ಜೋಶಿ ಹೇಳಿದರು.
ಭಾವಸಾರ ಕ್ಷತ್ರಿಯ ಸಮಾಜದಿಂದ ಭಗವದ್ಗೀತಾ 9 ಮತ್ತು 12ನೇ ಅಧ್ಯಾಯ ಪಾರಾಯಣ ನೆರವೇರಿತು. 2012ರಲ್ಲಿ ತಮಿಳುನಾಡಿನ ಉತ್ಕೃಷ್ಟ ಶಿಲೆಗಳಿಂದ ನಿರ್ಮಾಣಗೊಂಡ ಈ ಬೃಹತ್ ದೇವಸ್ಥಾನದ ಸುತ್ತಲೂ ಇರುವ ಶ್ರೀದೇವಿ, ಭೂದೇವಿ, ಗಣಪತಿ, ಮೈಲಾರಲಿಂಗೇಶ್ವರ, ನಾಗದೇವತೆಗಳ ಮಂಟಪಗಳಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜಾ ಅಲಂಕಾರ ನೆರವೇರಿಸಲಾಗಿತ್ತು.
ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಸೇರಿ ಆಡಳಿತ ಮಂಡಳಿ, ವ್ಯವಸ್ಥಾಪಕ ರಮೇಶ ಬಾವಿಕಟ್ಟಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.



