ಬಳ್ಳಾರಿ: ಬ್ಯಾನರ್ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಒಂದೇ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಎಲ್ಲದಲ್ಲೂ ಅವರು ಎ1 ಆರೋಪಿ ಆಗಿದ್ದಾರೆ.
ಶಾಸಕ ಭರತ್ ರೆಡ್ಡಿ ಅವರ ಆಪ್ತ ಚಾನಾಳ್ ಶೇಖರ್ ಅವರು ಕೊಲೆಯತ್ನ ಆರೋಪದಡಿ ದೂರು ನೀಡಿದ್ದು, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮತ್ತೊಂದೆಡೆ, ಮೃತ ರಾಜಶೇಖರ್ ಸಹೋದರ ಈಶ್ವರ ರೆಡ್ಡಿ ಅವರು ಕೊಲೆ ಆರೋಪದಡಿ ದೂರು ಸಲ್ಲಿಸಿದ್ದು, ಜನಾರ್ದನ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸೇರಿ ಹಲವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇದಲ್ಲದೆ, ವಾಲ್ಮೀಕಿ ಬ್ಯಾನರ್ ಹರಿದು ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಲೋಕೇಶ್ ನೀಡಿದ ದೂರಿನ ಮೇರೆಗೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಮೂಲಕ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ಕೊಲೆ, ಕೊಲೆಯತ್ನ ಹಾಗೂ ಅಟ್ರಾಸಿಟಿ ಸೇರಿ ಗಂಭೀರ ಆರೋಪಗಳಿರುವ ನಾಲ್ಕು ಕೇಸ್ಗಳು ದಾಖಲಾಗಿವೆ.
ಘಟನೆ ಸಂಬಂಧ ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.



