ತುಮಕೂರು: ಶ್ರೀಮಂತ ಕುಟುಂಬವೊಂದರಲ್ಲಿ ಮದುವೆ ಸಂಭ್ರಮದ ತಯಾರಿ ನಡೆಯುತ್ತಿದ್ದಾಗಲೇ, ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಮಗಳು ಮನೆಯ ವಾಹನ ಚಾಲಕನ ಜೊತೆ ಓಡಿಹೋಗಿ ಮದುವೆಯಾಗಿರುವ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಯುವತಿಯ ಕುಟುಂಬವು ಮಾವನ ಮಗನ ಜೊತೆ ಮದುವೆ ನಿಶ್ಚಯಿಸಿ, ನಿಶ್ಚಿತಾರ್ಥ ಮುಗಿಸಿ, ಮದುವೆ ಕಾರ್ಡ್ ಹಂಚಿಕೆ, ಚೌಲ್ಟ್ರಿ ಬುಕ್ಕಿಂಗ್, ಊಟ ಹಾಗೂ ಡೆಕೊರೇಷನ್ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯುವತಿ ಮನೆಯ ಪಾರ್ಟ್‌ಟೈಂ ಚಾಲಕ ರವೀಶ ಜೊತೆ ಓಡಿಹೋಗಿ, ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ.
ಮಗಳು ಕಾಣೆಯಾಗಿದ್ದರಿಂದ ಕುಟುಂಬಸ್ಥರು ತುಮಕೂರು ನಗರ ಠಾಣೆಗೆ ದೂರು ನೀಡಿದರು. ಆದರೆ ಪ್ರಕರಣದಲ್ಲಿ ತಿರುವು ಉಂಟಾಗಿ, ಯುವತಿಯೇ ಪೊಲೀಸರ ಮುಂದೆ ಹಾಜರಾಗಿ, ಕುಟುಂಬದವರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಭದ್ರತೆ ಕೋರಿ ಕಣ್ಣೀರಿಟ್ಟಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಸಹೋದರ, “ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಆಕೆಯ ಒಪ್ಪಿಗೆಯೇ ಎಲ್ಲಾ ಸಿದ್ಧತೆ ಮಾಡಿದ್ದೆವು. ತಾಯಿ ಆರೋಗ್ಯ ಸಮಸ್ಯೆ ಇದ್ದರೂ ಮದುವೆಗಾಗಿ ಓಡಾಡುತ್ತಿದ್ದರು. ಮದುವೆ ಬೇಡ ಎಂದಿದ್ದರೆ ಹೇಳಬಹುದಿತ್ತು. ಈ ರೀತಿ ನಡೆದುಕೊಂಡಿದ್ದು ನಮಗೆ ದೊಡ್ಡ ಶಾಕ್” ಎಂದು ಹೇಳಿದ್ದಾರೆ.
ಯುವತಿ ಕಾಣೆಯಾದ ಪ್ರಕರಣ ದಾಖಲಾದ ನಂತರ, ಪ್ರೇಮಿಗಳು ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಬೆದರಿಕೆ ಆರೋಪದ ಹಿನ್ನೆಲೆ, ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬಗಳ ಒಪ್ಪಿಗೆ ಪಡೆದು, ಖುಲಾಸೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.



