HomeArt and Literatureಮಾದಕ ಮರಣಮಾರ್ಗ, ಜಾಗೃತಿ ಜೀವನಮಾರ್ಗ

ಮಾದಕ ಮರಣಮಾರ್ಗ, ಜಾಗೃತಿ ಜೀವನಮಾರ್ಗ

For Dai;y Updates Join Our whatsapp Group

Spread the love

ಯೌವನವೆಂದರೆ ಯತ್ನದ ಯುಗ, ಯಶಸ್ಸಿನ ಯಾತ್ರೆ, ಯೋಚನೆಯ ಯೋಗ. ಆದರೆ ಇಂದಿನ ಕಾಲಘಟ್ಟದಲ್ಲಿ ಕೆಲ ಯುವಕರು ಯೋಗ್ಯ ದಾರಿಯನ್ನು ಬಿಟ್ಟು ಮಾದಕ ಮೃಗತೃಷ್ಣೆಯ ಕಡೆಗೆ ಮರುಳಾಗುತ್ತಿರುವುದು ಮನಕಲುಕುವ ಸಂಗತಿ.

ಮಾದಕ ಪದಾರ್ಥಗಳು ಮೊದಲು ಮಧುರ ಮೃಗಜಾಲದಂತೆ ಮಿಂಚುತ್ತವೆ; ನಂತರ ಮನುಜ ಮನಸ್ಸನ್ನು ಮಂಕುಗೊಳಿಸಿ, ಮೌಲ್ಯಗಳನ್ನು ಮಣ್ಣಾಗಿಸುತ್ತವೆ. ಒಂದು ಕ್ಷಣದ ಕುತೂಹಲ, ಜೀವನದ ಕುಸಿತಕ್ಕೆ ಕಾರಣವಾಗಬಹುದು; ಒಂದು ಸಣ್ಣ ಸವಿಗೆ ಸಂಪೂರ್ಣ ಸುಖವನ್ನು ಸವೆಸಬಹುದು. ಈ ಭಯಾನಕ ಸತ್ಯವನ್ನು ಸಮಾಜದ ಮುಂದೆ ಸ್ಪಷ್ಟವಾಗಿ ಚಿತ್ರಗಳ ಮೂಲಕ ಚಿತ್ರೀಕರಿಸಿರುವವರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ. ಅವರ ಚಿತ್ರಗಳು ಕೇವಲ ರೇಖೆಗಳಲ್ಲ. ಅವು ಜಾಗೃತಿಯ ಜ್ವಾಲೆ, ಜೀವನದ ಜಾಗೃತಿ ಘಂಟೆ.

ಸಿರಿಂಜ್‌ನ ಸಂಕೇತ, ಕತ್ತಲೆಯ ಕೈಗಳ ಹಿಡಿತ, ಕನಸುಗಳನ್ನು ಕುಸಿಯುವ ಗುಳಿಗೆಗಳ ಚಿತ್ರಣ… ಹೀಗೆ ಪ್ರತಿ ಚಿತ್ರವೂ ಪ್ರಾಸಂಗಿಕ ಸಂದೇಶವನ್ನು ಪ್ರಬಲವಾಗಿ ಸಾರುತ್ತದೆ: “Stop on drugs” ಎಂಬುದು ಕೇವಲ ವಾಕ್ಯವಲ್ಲ, ಭವಿಷ್ಯವನ್ನು ಬಾಚಿಕೊಳ್ಳುವ ಬಲವಾದ ಬದ್ಧತೆ. ಡಾ. ನಂದಾ ಹಣಬರಟ್ಟಿ ಅವರ ಕಲಾಶ್ರಮ ಯುವಜನತೆಗೆ ಎಚ್ಚರಿಕೆಯ ಸಂದೇಶವಾಗಿದೆ. ಅವರ ಕಲಾಕೃತಿ ಹೇಳುವುದು ಒಂದೇ ಮಾತು- `ಮಾದಕ ಮದ ಕ್ಷಣಿಕ, ಅದರ ಮಸಿ ಶಾಶ್ವತ.’

ಮಾದಕ ವ್ಯಸನವು ವ್ಯಕ್ತಿಯ ಪ್ರಗತಿಯನ್ನು ಪತನಗೊಳಿಸುವ ಪಾತಾಳ; ಕುಟುಂಬದ ಕನಸುಗಳನ್ನು ಕರಗಿಸುವ ಕಹಿ ಕತ್ತಲೆ. ಒಬ್ಬ ಯುವಕನ ವ್ಯಸನ, ಒಟ್ಟು ಮನೆಯ ವ್ಯಥೆ; ಒಂದು ಮನೆ ಕುಸಿದರೆ, ಸಮಾಜವೇ ಕುಂದುತ್ತದೆ. ಯುವ ಶಕ್ತಿಯು ದೇಶದ ಸಂಪತ್ತು. ಅದು ಮಲಿನ ಮಾದಕಕ್ಕೆ ಮಣಿದರೆ, ಭವಿಷ್ಯವೇ ಮಸುಕಾಗುತ್ತದೆ. ಆದರೆ ಜಾಗೃತಿಯ ಜ್ಯೋತಿ ಜ್ವಲಿಸಿದರೆ, ಯುವ ಮನಗಳು ಯಶಸ್ಸಿನ ಯುಗವನ್ನು ನಿರ್ಮಿಸಬಲ್ಲವು.

ಪೋಷಕರು ಪ್ರೀತಿ ನೀಡಿ ಪಥ ತೋರಬೇಕು; ಶಿಕ್ಷಕರು ಶಿಸ್ತು ನೀಡಿ ಶಕ್ತಿ ತುಂಬಬೇಕು; ಸಮಾಜವು ಸಹಕಾರ ನೀಡಿ ಸದುದ್ದೇಶ ಬೆಳೆಸಬೇಕು. ಈ ಕಾರ್ಯ ಪ್ರಾಮಾಣಿಕವಾದಲ್ಲಿ ಮಾದಕ ಮಾರುಕಟ್ಟೆ ಮಣಿಯುತ್ತದೆ.

ಚಿತ್ರಗಳು ಮಾತಾಡುತ್ತವೆ-ಮೌನದಲ್ಲೇ ಮಹತ್ವದ ಸಂದೇಶ ಸಾರುತ್ತವೆ. ಡಾ. ನಂದಾ ಹಣಬರಟ್ಟಿ ಅವರ ಈ ಕಲಾ ಪ್ರಯತ್ನ ಸಮಾಜದ ಮನಸ್ಸಿಗೆ ಮದ್ದು, ಯುವಜನತೆಗೆ ದಿಕ್ಕು, ಭವಿಷ್ಯಕ್ಕೆ ಬೆಳಕು.

ಬನ್ನಿ, ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡೋಣ: ಮಾದಕಕ್ಕೆ ಮುತ್ತಿಗೆ ಹಾಕೋಣ, ಮೌಲ್ಯಗಳಿಗೆ ಮುಕುಟ ಹಾಕೋಣ. ಮಾದಕವನ್ನು ತಳ್ಳಿ, ಮಾನವೀಯತೆಯನ್ನು ತಾಳಿ-ಇದೇ ಜೀವನದ ಜಯಗಾನ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾದಕ ವ್ಯಸನದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದ್ದಾರೆ. ಈ ಮಾತು ಕೇವಲ ಮನವಿ ಅಲ್ಲ, ಸಾಮಾಜಿಕ ಸಂವೇದನೆಯ ಸತ್ಯಸಾಕ್ಷಿ.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು, `ಮಾದಕ ವ್ಯಸನವು ಯುವಜನರ ಭವಿಷ್ಯವನ್ನು ಭಸ್ಮಗೊಳಿಸುವ ಭೀಕರ ಬೆಂಕಿ. ಅದನ್ನು ಆರಿಸಲು ಕಾನೂನು ಕ್ರಮಗಳ ಜೊತೆಗೆ ಕುಟುಂಬ ಹಾಗೂ ಸಮಾಜದ ಕಾಳಜಿಯ ಕೈಗಳು ಕೂಡ ಅಗತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

-ವಸಂತ ಬಿ. ಮಡ್ಲೂರ
ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!