ನವದೆಹಲಿ: ಸುಂಕಗಳನ್ನು ಕುರಿತು ಟೀಕೆಗಳು ಬಂದಾಗಲೂ ಸರ್ಕಾರ ತಾಳ್ಮೆ ಕಾಪಾಡಿಕೊಂಡಿತ್ತು. ಆ ತಾಳ್ಮೆಯ ಫಲವಾಗಿ ಇಂದು ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡ ಹಿನ್ನೆಲೆಯಲ್ಲಿ, ಇಂದು ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಸುಂಕಗಳ ಕುರಿತಾಗಿ ನಡೆದ ಮಾತುಕತೆಗಳ ಸಂದರ್ಭದಲ್ಲಿ ಸರ್ಕಾರದ ನಿಲುವಿಗೆ ಟೀಕೆಗಳು ಬಂದಿದ್ದರೂ, ಅವುಗಳೇ ಈಗ ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಅವರು ಹೇಳಿದರು.
ವ್ಯಾಪಾರ ಒಪ್ಪಂದವು ದೇಶಕ್ಕೆ ಅನುಕೂಲಕರ ಆರ್ಥಿಕ ವಾತಾವರಣವನ್ನು ನಿರ್ಮಿಸಿದ್ದು, ಇದು ಭಾರತದ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆದಿದೆ ಎಂದು ಪ್ರಧಾನಿ ಶ್ಲಾಘಿಸಿದರು.
“ವಿಶ್ವದ ಆಲೋಚನೆ ಈಗ ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ವಾಲುತ್ತಿದೆ ಎಂದು ನಾನು ಹಲವು ಜಾಗತಿಕ ವೇದಿಕಗಳಲ್ಲಿ ಹೇಳಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳು ಇರುವ ನಡುವೆಯೂ ಭಾರತವು ಅದರಿಂದ ಪ್ರಯೋಜನ ಪಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.



