ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಪ್ರಸಿದ್ಧ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ ನಿರ್ವಹಣಾ ಕಾರ್ಯದ ವೇಳೆ ತಾಂತ್ರಿಕ ದೋಷ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಆದರೆ ಕೆಪಿಸಿಎಲ್ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ವಿದ್ಯುತ್ ಉತ್ಪಾದನೆಯನ್ನು ಹಂತ ಹಂತವಾಗಿ ಪುನರಾರಂಭಿಸಲಾಗಿದೆ.
ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯಲ್ಲಿರುವ ಶರಾವತಿ ಜಲವಿದ್ಯುತ್ ಕೇಂದ್ರದ 7ನೇ ಘಟಕದಲ್ಲಿ ನಿಯಮಿತ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಪೆನ್‌ಸ್ಟಾಕ್ ಪೈಪ್‌ನಲ್ಲಿದ್ದ ನೀರನ್ನು ಹೊರಹಾಕುವ ಸಂದರ್ಭದಲ್ಲಿ ಡ್ರೈನ್ ವಾಲ್ವ್‌ನಲ್ಲಿ ಏಕಾಏಕಿ ಸೋರಿಕೆ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ನೀರು ಟರ್ಬೈನ್ ವಿಭಾಗದೊಳಗೆ ನುಗ್ಗಿದೆ.
ಡ್ರೈನ್ ವಾಲ್ವ್‌ನ ಸೋರಿಕೆಯಿಂದ ಟರ್ಬೈನ್ ಹಾಗೂ ನೆಲಮಾಳಿಗೆಯ ಭಾಗದಲ್ಲಿ ಸುಮಾರು ಒಂದೂವರೆ ಅಡಿ ಎತ್ತರದಷ್ಟು ನೀರು ಶೇಖರಣೆಯಾಗಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಚಾಲನೆಯಲ್ಲಿದ್ದ 1, 8 ಹಾಗೂ 9ನೇ ಘಟಕಗಳ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಪಿಸಿಎಲ್ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಾಚರಣೆ ಕೈಗೊಂಡಿತು. ಸೋರಿಕೆಯನ್ನು ನಿಯಂತ್ರಿಸಿದ ಬಳಿಕ ಪಂಪ್‌ಗಳ ಸಹಾಯದಿಂದ ನೆಲಮಾಳಿಗೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಸಂಪೂರ್ಣವಾಗಿ ಹೊರಹಾಕಲಾಯಿತು.
ನಂತರ ವಿದ್ಯುದಾಗಾರದ ಎಲ್ಲ ಘಟಕಗಳ ಸುರಕ್ಷತೆಯನ್ನು ಪರಿಶೀಲಿಸಿದ ಅಧಿಕಾರಿಗಳು ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ಖಚಿತಪಡಿಸಿಕೊಂಡರು. ಇದರ ಬಳಿಕ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಘಟಕಗಳಲ್ಲಿ ಬುಧವಾರ ಸಂಜೆ ವೇಳೆಗೆ ಹಂತ ಹಂತವಾಗಿ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಲಾಗಿದೆ.
ಕೆಪಿಸಿಎಲ್ ಅಧಿಕಾರಿಗಳ ತ್ವರಿತ ಕ್ರಮದಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದ್ದು, ಜಲವಿದ್ಯುತ್ ಕೇಂದ್ರದ ಕಾರ್ಯಾಚರಣೆ ಇದೀಗ ಎಂದಿನಂತೆ ಮುಂದುವರಿದಿದೆ.



