ಬೆಂಗಳೂರು: ತೆರೆಯ ಮೇಲೆ ಎಂತಹ ಸಂಕೀರ್ಣ ಸಮಸ್ಯೆಗಳನ್ನಾದರೂ ಬುದ್ಧಿವಂತಿಕೆಯಿಂದ ಬಿಡಿಸುವ ರಿಯಲ್ ಸ್ಟಾರ್ ಉಪೇಂದ್ರ, ನಿಜ ಜೀವನದಲ್ಲಿ ಸೈಬರ್ ವಂಚಕರ ಬಲೆಗೆ ಬಿದ್ದ ಘಟನೆ ಈಗ ಮತ್ತೆ ಚರ್ಚೆಗೆ ಬಂದಿದೆ. ಕಳೆದ ವರ್ಷ ನಟಿ ಪ್ರಿಯಾಂಕಾ ಉಪೇಂದ್ರ ಅವರ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಸುಮಾರು 1.5 ಲಕ್ಷ ರೂಪಾಯಿಗಳನ್ನು ದೋಚಿದ್ದ ಪ್ರಕರಣದಲ್ಲಿ ಪೊಲೀಸರು ಬಿಹಾರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಬೇರು ಸೆಪ್ಟೆಂಬರ್ 15ಕ್ಕೆ ಹೋಗುತ್ತದೆ. ಆ ದಿನ ಪ್ರಿಯಾಂಕಾ ಉಪೇಂದ್ರ ಅವರು ಆನ್ಲೈನ್ನಲ್ಲಿ ವಸ್ತುವೊಂದನ್ನು ಬುಕ್ ಮಾಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಅವರ ಮೊಬೈಲ್ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ಕ್ಷಣದಲ್ಲೇ ಹ್ಯಾಕರ್ಗಳು ವಾಟ್ಸಾಪ್ ಖಾತೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪ್ರಿಯಾಂಕಾ ಹೆಸರಿನಲ್ಲಿ ಅವರ ಸಂಪರ್ಕದಲ್ಲಿದ್ದವರಿಗೆ ತುರ್ತು ಹಣ ಕೇಳುವ ಸಂದೇಶಗಳನ್ನು ರವಾನಿಸಲಾಗಿದೆ.
ಈ ಸಂದೇಶಗಳನ್ನು ನಂಬಿದ ಉಪೇಂದ್ರ ಅವರ ಮಗ, ತಾಯಿಯೇ ಹಣ ಕೇಳುತ್ತಿದ್ದಾರೆಂದು ಭಾವಿಸಿ 50 ಸಾವಿರ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಅಲ್ಲದೆ, ಉಪೇಂದ್ರ ಮತ್ತು ಅವರ ಮ್ಯಾನೇಜರ್ಗಳಿಗೂ ಕರೆ ಮಾಡುವ ಪ್ರಯತ್ನ ನಡೆದಿದ್ದು, ಅವರ ಫೋನ್ಗಳಿಗೂ ಹ್ಯಾಕ್ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಈ ರೀತಿ ಹಂತ ಹಂತವಾಗಿ ಒಟ್ಟು 1.5 ಲಕ್ಷ ರೂಪಾಯಿಗಳನ್ನು ಸೈಬರ್ ಖದೀಮರು ದೋಚಿದ್ದಾರೆ.
ಹಣ ಕಳೆದುಕೊಂಡ ಬಳಿಕ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಬಿಹಾರದ ದಶರಥಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ವಂಚಕರ ಜಾಲದ ಸುಳಿವು ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಬಂಧಿಸಲಾಗಿದ್ದು, ಆ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಯುವಕರು ಇದೇ ರೀತಿಯ ಆನ್ಲೈನ್ ವಂಚನೆಗಳಲ್ಲಿ ತೊಡಗಿಸಿಕೊಂಡಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸದ್ಯ ಸೆಂಟ್ರಲ್ ಡಿವಿಷನ್ ಸೈಬರ್ ಕ್ರೈಂ ಪೊಲೀಸರು ಪ್ರಕರಣದ ಆಳವಾದ ತನಿಖೆ ನಡೆಸುತ್ತಿದ್ದು, ಈ ಘಟನೆ ಸಾಮಾನ್ಯ ಜನರಿಗೆ ದೊಡ್ಡ ಎಚ್ಚರಿಕೆಯ ಘಂಟೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ದಂಪತಿಯೇ ವಂಚನೆಗೆ ಒಳಗಾಗಿರುವುದು, ಅಪರಿಚಿತ ಲಿಂಕ್ಗಳು ಮತ್ತು ತುರ್ತು ಹಣ ಕೇಳುವ ಮೆಸೇಜ್ಗಳ ಬಗ್ಗೆ ಎಷ್ಟು ಎಚ್ಚರಿಕೆ ಅಗತ್ಯವೋ ಎಂಬುದನ್ನು ಮತ್ತೆ ನೆನಪಿಸಿದೆ.



