ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳೇ, ಎಲ್ಲ ನಿಗಮಗಳಲ್ಲಿ ಸಾಲ ಪಡೆದವರ ಬಡ್ಡಿ ಮನ್ನಾ ಮಾಡಿಲ್ಲವೇಕೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳ ಬಡ್ಡಿ ಮನ್ನಾ ಮಾಡಿದ್ದೀರಿ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಯಾಕೆ ಮಾಡಿಲ್ಲ ಎಂದು ಕೇಳಿದರು. ವಾಲ್ಮೀಕಿ ನಿಗಮದ ಬಡ್ಡಿ ಮನ್ನಾ ಯಾಕೆ ಮಾಡಿಲ್ಲ? ಇತರ ಹಿಂದುಳಿದ ವರ್ಗಗಳ ನಿಗಮದಲ್ಲಿ ಕೊಟ್ಟ ಸಾಲದ ಬಡ್ಡಿ ಯಾಕೆ ಮನ್ನಾ ಮಾಡಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಕೇವಲ ಒಂದು ಕೋಮನ್ನು ಓಲೈಸುವುದು ನಿಮ್ಮ ಜಾತ್ಯತೀತತೆಯೇ? ಉಳಿದ ನಿಗಮಗಳಲ್ಲೂ ಬಡ್ಡಿ ಮನ್ನಾ ಮಾಡಿದ್ದರೆ ಅದು ಒಪ್ಪುವ ಮಾತಾಗುತ್ತಿತ್ತು. ನಿಮ್ಮದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಅದೇ ಹಳೇ ಕಥೆ; ಇದನ್ನೇ ಮತ್ತೆ ಮುಂದುವರೆಸಿದ್ದೀರಿ ಎಂದು ಆಕ್ಷೇಪಿಸಿದರು.
ಜಿಬಿಎಯ 5 ಮಹಾನಗರ ಪಾಲಿಕೆಗಳನ್ನೂ ನಾವು ಗೆಲ್ಲಲಿದ್ದೇವೆ. ಅದನ್ನು ಗೆಲ್ಲಲು ಬೇಕಾದ ಎಲ್ಲ ವಾತಾವರಣ ಇದೆ. ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಇದೆ. ಬೆಂಗಳೂರಿನ ಜನರು ಬೇಸತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.



