ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆಶ್ರಯ ನಿವೇಶನದ ಹಕ್ಕುಪತ್ರ ನೀಡಿ 8 ವರ್ಷ ಕಳೆದರೂ ನಿವೇಶನ ಗುರುತಿಸಿಕೊಟ್ಟಿಲ್ಲ, ನಿವೇಶನಕ್ಕೆ ಸಂಪರ್ಕ ರಸ್ತೆಯೂ ಇಲ್ಲ. ನಿವೇಶನದಲ್ಲಿ ಯಾವುದೇ ಮೂಲಭೂತ ಸೌಲಭ್ಯವೂ ಇಲ್ಲ. ಈ ಬಗ್ಗೆ ನಿತ್ಯ ಪುರಸಭೆಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ, ಗೋಗರೆದರೂ ಯಾರೊಬ್ಬರೂ ಸ್ಪಂದಿಸದ್ದರಿಂದ ಅಸಮಾಧಾನಗೊಂಡ ಫಲಾನುಭವಿಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯವರು ಸೋಮವಾರ ಪುರಸಭೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ರಸ್ತೆ ಸಂಪರ್ಕ ಇಲ್ಲದ ಭೂಮಿ ಖರೀದಿಸಿ 2018ರಲ್ಲಿ ಹಕ್ಕುಪತ್ರ ವಿತರಣೆ ಮಾಡಿದ್ದರೂ ಇಲ್ಲಿವರೆಗೂ ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಟ್ಟಿಲ್ಲ. ಅಲ್ಲಿ ಯಾವುದೇ ಸೌಲಭ್ಯವೂ ಇಲ್ಲ. ಹಕ್ಕುಪತ್ರ ಕೊಡುವ ವೇಳೆ ಪ್ರತಿ ಫಲಾನುಭವಿಗಳಿಂದ ನಿವೇಶನದ ಅಭಿವೃದ್ಧಿಗಾಗಿ 2 ಸಾವಿರ ರೂ ಹಣ ತೆಗೆದುಕೊಂಡಿದ್ದಾರೆ. ಸಂಗ್ರಹವಾದ 9 ಲಕ್ಷದಲ್ಲಿ ಕಚ್ಚಾ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ ಮೇಲ್ನೋಟಕ್ಕೆ ಇದರಲ್ಲಿಯೂ ಹಣದ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ರಸ್ತೆ ಸಂಪರ್ಕಕ್ಕೆ 9 ಗುಂಟೆ ಭೂಮಿ ಕೊಡಲು ಸಾರ್ವಜನಿಕರ ರೊಬ್ಬರು ಸಿದ್ಧರಿದ್ದರೂ ಖರೀದಿಸಲು 2/3 ಲಕ್ಷ ರೂ ಸಾಮಾನ್ಯನಿಧಿ ಪುರಸಭೆಯಲ್ಲಿ ಇಲ್ಲವೋ ಅಥವಾ ಇವರಿಗೆ ಬಡವರ ಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಇಲ್ಲವೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಡು ಬಿಸಿಲಿನಲ್ಲಿಯೇ ಫಲಾನುಭವಿಗಳು ಚಿಕ್ಕ ಮಕ್ಕಳೊಂದಿಗೆ ಧರಣಿ ನಡೆಸಿದರು. ಸಂಜೆ ವೇಳೆಗೆ ಧರಣಿ ನಿರತರನ್ನು ಸಮಾಧಾನಪಡಿಸಿದ ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಆಡಳಿತಾಧಿಕಾರಿಗಳ ನಿರ್ದೇಶನದಂತೆ ನಿವೇಶನಕ್ಕೆ ಸಂಪರ್ಕ ಕಲ್ಪಿಸಲು ಜಮೀನು ಖರೀದಿ, ನಿವೇಶನ ಗುರುತಿಸಿಕೊಡುವ ಕಾರ್ಯವನ್ನೂ ಕೂಡಲೇ ಮಾಡಲಾಗುವುದು. ಫೆ. 6ರಂದು ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಡಾ. ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಆಶ್ರಯ ನಿವೇಶನದಲ್ಲಿ ನೀರು, ವಿದ್ಯುತ್, ರಸ್ತೆ, ಚರಂಡಿ ಸೇರಿ ಮೂಲಭೂತ ಸೌಲಭ್ಯಕ್ಕಾಗಿ 5,07,65,000 ರೂ.ಗಳ ಅಂದಾಜು ಪತ್ರಿಕೆಯೊಂದಿಗೆ ಅನುದಾನಕ್ಕಾಗಿ ರಾಜೀವ ಗಾಂಧಿ ನಿಗಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಅನುದಾನ ಬಿಡುಗಡೆ ಆಗುತ್ತಿದ್ದಂತೆಯೇ ಕಾಮಗಾರಿ ಕೈಗೊಳ್ಳಲಾಗುವುದು. ದಯವಿಟ್ಟು ಇನ್ನಷ್ಟು ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಫಲಾನುಭವಿಗಳು ತಾತ್ಕಾಲಿಕವಾಗಿ ಧರಣಿ ಹಿಂಪಡೆಯುವುದಾಗಿ ಹೇಳಿದರು. ಸಿಪಿಐ ಬಿ.ವಿ. ನ್ಯಾಮಗೌಡ್ರ, ಪಿಎಸ್ಐ ನಾಗರಾಜ ಗಡಾದ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದರು.
ಈ ವೇಳೆ ಸಂಘಟನೆಯ ಸುರೇಶ ಹಟ್ಟಿ, ಪ್ರಕಾಶ ಕೊಂಚಿಗೇರಿಮಠ, ಸುರೇಶ ಮಿಸ್ಕಿನ್, ಇಲಿಯಾಸ್ ಅಲಿ ಮೀರಾನವರ, ಮಂಜಪ್ಪ ಶಿರಹಟ್ಟಿ, ಮಹಾಂತೇ ಗುದ್ನಾಳ, ರೇವತಿ ಕಟ್ಟಿಮನಿ, ನಜೀರ ನದಾಫ್, ಸೋಮಯ್ಯ ಕಲಕೇರಿಮಠ, ಶಿವಪ್ಪ ಭಗೀರಕಾರ, ಯಾಸ್ಮಿನಭಾನು ಪೀರಜಾಧೆ, ಪಾತಿಮಾ ಕಾಗದಗಾರ, ಶೋಭಾ ಕಮತದ, ರೇಣುಕಾ ಮುದಕವಿ ಸೇರಿ ಅನೇಕ ಮಹಿಳೆಯರು ಇದ್ದರು.
ಧರಣಿ ನಿರತ ಮಹಿಳೆಯರು ಮಾತನಾಡಿ, ಕಳೆದ 8 ವರ್ಷದಿಂದ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳ ಕಾಲು ಹಿಡಿದು ಅಂಗಲಾಚಿ ಬೇಡಿಕೊಂಡಿದ್ದೇವೆ. ಪುರಸಭೆಗೆ ಅಲೆದು ಸುಸ್ತಾಗಿದ್ದೇವೆ. ನಿವೇಶನ ಜಾಗಕ್ಕೆ ಟ್ಯಾಕ್ಸ್ ಕಟ್ಟುತ್ತಾ ಬಂದಿದ್ದೇವೆ. ಸ್ವಂತ ಸೂರಿನ ಕನಸು ಹೊತ್ತ ನಮ್ಮಂತಹ ನೂರಾರು ಗುಡಿಸಲು ವಾಸಿ, ಬಾಡಿಗೆ ನಿವಾಸಿಗಳ ಗೋಳು ಕೇಳುವವರಾರೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.



