ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೀಪದ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಗುಂದ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ದಂಧೆ ರಾಜಾರೋಷವಾಗಿ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮೀಣ ಭಾಗದಲ್ಲಿ ದಂಧೆಕೋರರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ತುಂಬಿಸಿಕೊಂಡು ನೀಲಗುಂದ, ಮಲ್ಲಿಗವಾಡ ರಸ್ತೆ ಮಾರ್ಗವಾಗಿ ಅಣ್ಣಿಗೇರಿ, ಹುಬ್ಬಳ್ಳಿಗೆ ರಾಜಾರೋಷವಾಗಿ ಕಳ್ಳ ಸಾಗಣೆ ಮಾಡುತ್ತಿರುವುದನ್ನು ಕಂಡು ಪ್ರಶ್ನಿಸಿದ ಸಾರ್ವಜನಿಕರಿಗೆ ದಂಧೆಕೋರರು ಬೆದರಿಕೆ ಹಾಕಿ ಮುಂದೆ ಸಾಗಿದ್ದಾರೆ. ಒಂದು ಹೊತ್ತಿನ ಊಟವಿಲ್ಲದೇ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಸರ್ಕಾರ ಬಡ, ಮಧ್ಯಮ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯೂ ದಂಧೆಕೋರರ, ಮಧ್ಯವರ್ತಿಗಳ ಪಾಲಾಗುತ್ತಿದ್ದು, ಅಧಿಕಾರಿಗಳು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅಕ್ಕಿ ಅಕ್ರಮ ಸಾಗಾಟ ದಂಧೆ ಹೆಚ್ಚಾಗಿದ್ದು, ಮನೆ ಮನೆಗೆ ತೆರಳಿ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿಸಿ, ಹೆಚ್ಚಿನ ಲಾಭಾಂಶಕ್ಕೆ ಮಾರಾಟ ಮಾಡುವ ದಂಧೆಕೋರರು ಯಾರ ಭಯವೂ ಇಲ್ಲದೇ ಪ್ಯಾಸೆಂಜರ್ ಆಟೋದಲ್ಲಿ 10-15 ಕ್ವಿಂಟಲ್ ಅಕ್ರಮ ಅಕ್ಕಿಯನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಕೊಡುತ್ತೇವೆ. ನಾವೇಕೆ ಹೆದರಬೇಕೆಂದು ಸಾರ್ವಜನಿಕರ ಮೇಲೆಯೇ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳೇ ಇಂತಹ ದಂಧೆಕೋರರ ರಕ್ಷಣೆಗೆ ನಿಂತಾಗ ಸರ್ಕಾರದ ಯೋಜನೆಗಳ ಗುರಿ ತಪ್ಪುತ್ತಿದೆ, ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಅಕ್ಕಿ ಮಾರಾಟ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಈ ಅಕ್ರಮ ಪಡಿತರ ದಂಧೆ ಹಲವು ವರ್ಷಗಳಿಂದಲೂ ನಡೆದಿದ್ದು, ನಗರಗಳಿಂದ ಗ್ರಾಮೀಣ ಭಾಗಕ್ಕೆ ಬಂದು ಮನೆಗಳಿಗೆ ತೆರಳಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸುತ್ತಿದ್ದಾರೆ. ಆದರೆ ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಲ್ಲಿ ಸಣ್ಣ ಅಧಿಕಾರಿಗಳಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗಿಯಾಗಿರುವ ಅನುಮಾನವಿದ್ದು, ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
-
ರವಿ ವಗ್ಗನವರ.
ಸಾಮಾಜಿಕ ಕಾರ್ಯಕರ್ತ, ನೀಲಗುಂದ.
“ನಾನು ಕಳೆದ ವಾರ ಗದಗಿಗೆ ವರ್ಗಾವಣೆಯಾಗಿ ಬಂದಿದ್ದು, ಪಡಿತರ ಅಕ್ರಮ ಸಾಗಾಟದ ಬಗ್ಗೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ಕೊಟ್ಟಿದ್ದೇನೆ. ಬೆಳದಡಿಯಲ್ಲಿ ನಿನ್ನೆ ಒಂದು ಪ್ರಕರಣ ದಾಖಲಾಗಿದೆ. ಸಾಗಾಟದ ಸಂದರ್ಭದಲ್ಲಿ ಯಾರಾದರೂ ಮಾಹಿತಿ ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ”
-
ಎಸ್.ಡಿ. ಪಾಟೀಲ.
ಆಹಾರ ಇಲಾಖೆ ಉಪನಿರ್ದೇಶಕರು, ಗದಗ.



