ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಪುರಾತನ ದೇವಸ್ಥಾನದ ಆವರಣದಲ್ಲಿ ನಿಜವಾದ ನಾಗಸರ್ಪ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಗದಗ ತಾಲೂಕಿನ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನಗಳ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು ಇತ್ತೀಚೆಗೆ ವೇಗ ಪಡೆದಿವೆ. ಚೌಕಿಮಠ ಕುಟುಂಬಕ್ಕೆ ಸೇರಿದ ಮನೆ ಸಂಕೀರ್ಣದೊಳಗಿನ ಹುದುಗಿದ ಈಶ್ವರ ದೇವಸ್ಥಾನವನ್ನು ‘ಮನೆಯೊಳಗೊಂದು ದೇವಸ್ಥಾನ’ ಎಂಬ ಶೀರ್ಷಿಕೆಯಡಿ ಟಿವಿ9 ವರದಿ ಪ್ರಸಾರ ಮಾಡಿದ್ದ ಬಳಿಕ ಈ ಐತಿಹಾಸಿಕ ತಾಣದ ಜೀರ್ಣೋದ್ಧಾರಕ್ಕೆ ಚೈತನ್ಯ ಬಂದಿದೆ.
ಈ ಹಿನ್ನೆಲೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದಾಗ ಮಾರುದ್ದದ ನಾಗರಹಾವು ಅಚ್ಚರಿಯ ರೀತಿಯಲ್ಲಿ ಪತ್ತೆಯಾಯಿತು. ಹಾವು ಕಾಣುತ್ತಿದ್ದಂತೆಯೇ ಕಾರ್ಮಿಕರು ದಂಗಾಗಿ ಕೆಲಕಾಲ ಕೆಲಸ ಸ್ಥಗಿತಗೊಳಿಸಿದರು. ಸ್ಥಳೀಯರಲ್ಲೂ ಭಯದ ವಾತಾವರಣ ಉಂಟಾಯಿತು. ಕೆಲವೇ ಕ್ಷಣಗಳಲ್ಲಿ ನಾಗಸರ್ಪ ಸರಿದು ಹೋಗಿದ್ದು, ಬಳಿಕ ಭಯದ ನಡುವೆಯೇ ಸ್ವಚ್ಛತಾ ಕಾರ್ಯ ಮತ್ತೆ ಮುಂದುವರಿಸಲಾಯಿತು.



