ಬೆಂಗಳೂರು: ವಿಧಾನಸೌಧದಲ್ಲಿರುವ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಚಿನ್ನ ಹಾಗೂ ಹಣ ಇರುವ ಬ್ಯಾಗ್ ನಾಪತ್ತೆಯಾಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಸಂಪೂರ್ಣ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸೌಧದ ಗೇಟ್‌ನಿಂದ ಆ ಬ್ಯಾಗ್ ಹೇಗೆ ಒಳಗೆ ಪ್ರವೇಶಿಸಿತು? ಯಾವ ಗೇಟ್ ಮೂಲಕ ಒಳಗೆ ಹೋಯಿತು ಎಂಬುದು ಮುಖ್ಯ. ಒಬ್ಬ ಸಚಿವರ ಕಚೇರಿವರೆಗೆ ಬ್ಯಾಗ್ ಹೋಗುತ್ತದೆ ಎಂದರೆ ಅದು ಗಂಭೀರ ವಿಷಯ. ಅದೂ ಯಾರಿಗೂ ತಿಳಿಯದೆ ಒಳಗೆ ತೆಗೆದುಕೊಂಡು ಹೋಗಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ,” ಎಂದು ಅವರು ಹೇಳಿದರು.
ಕಳವು ವಿಚಾರಕ್ಕಿಂತ ಮೊದಲು ಆ ಬ್ಯಾಗ್ ವಿಧಾನಸೌಧದೊಳಗೆ ಹೇಗೆ ತಲುಪಿತು ಎಂಬುದನ್ನು ಪತ್ತೆಹಚ್ಚುವುದು ಅಗತ್ಯವೆಂದು ಅವರು ಸ್ಪಷ್ಟಪಡಿಸಿದರು. ‘ನವೀನ್’ ಎಂಬ ವ್ಯಕ್ತಿ ಬ್ಯಾಗ್ ಅನ್ನು ಒಳಗೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.



