ಚಿಕ್ಕಬಳ್ಳಾಪುರ: ಜಿಲ್ಲೆಯ 17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಕಲ್ಯಾಣಿ, ಇಂದು ಬೆಳಿಗ್ಗೆ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಆದರೆ ಪ್ರಕರಣ ಗಂಭೀರ ತಿರುವು ಪಡೆದಿದ್ದು, ಬಾಲಕಿ ಸಾವನ್ನಪ್ಪಿದ ಬಳಿಕ ಪೋಷಕರು ಮತ್ತು ಸಂಬಂಧಿಕರು ಸ್ಥಳೀಯ ನಂದಗುಡಿ ಪೊಲೀಸರಿಗೆ ಮಾಹಿತಿ ನೀಡದೆ ಶವವನ್ನು ನೇರವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈತಮಾಕಲಹಳ್ಳಿ ಗ್ರಾಮಕ್ಕೆ ಸಾಗಿಸಿರುವುದು.
ಇನ್ನೇನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಾಗ, ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಸ್ಕಾರವನ್ನು ತಡೆದಿದ್ದಾರೆ. ಶವವನ್ನು ವಾಪಸ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡಿದ್ದಾರೆ.
ಮೃತಳ ದೊಡ್ಡಮ್ಮ ಮುನಿರತ್ನಮ್ಮ, “ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಸಾವಿನ ಹಿಂದೆ ಯಾವುದೇ ಅನುಮಾನ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಯಾವುದೇ ಅಸಹಜ ಸಾವು ಸಂಭವಿಸಿದಾಗ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುವ ಹಿನ್ನೆಲೆ, ಶವವನ್ನು ತಿಳಿಸದೆ ಸಾಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದು ಆಕಸ್ಮಿಕ ಸಾವೋ? ಆತ್ಮಹತ್ಯೆಯೋ? ಸಾವಿನ ಹಿಂದೆ ಪ್ರಚೋದನೆ ಅಥವಾ ಇತರ ಕಾರಣಗಳಿವೆಯೇ? ಎಂಬ ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಮತ್ತು ನಂದಗುಡಿ ಪೊಲೀಸರು ಜಂಟಿಯಾಗಿ ಪ್ರಕರಣದ ಸುತ್ತಮುತ್ತಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.
ಕಲ್ಯಾಣಿಯನ್ನು ದೊಡ್ಡಪ್ಪ-ದೊಡ್ಡಮ್ಮ ದತ್ತು ಪಡೆದಿದ್ದು, ಅವರಿಗೆ ಸ್ವಂತ ಮಕ್ಕಳಿರಲಿಲ್ಲ ಎನ್ನಲಾಗಿದೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.



